ಹಾವೇರಿ, ಜು. 25 (DaijiworldNews/AA): 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ ಸಚಿನ್ ಬಸವರಾಜ್ ಗುತ್ತೂರು ಅವರು ಅಖಿಲ ಭಾರತ ಮಟ್ಟದಲ್ಲಿ ೪೧ನೇ ರ್ಯಾಂಕ್ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ದೇಶದ ಅಗ್ರ 50 ರ್ಯಾಂಕ್ ಗಳಿಸಿದವರಲ್ಲಿ ಒಬ್ಬರಾಗಿ ಹೊರಹೊಮ್ಮುವ ಮೂಲಕ ಬಸವರಾಜ್ ಅವರು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿರುವ ಡಾ. ಸಚಿನ್ ಬಸವರಾಜ್ ಗುತ್ತೂರು, ವೈದ್ಯಕೀಯ ವೃತ್ತಿ ತೊರೆದು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದವರಾದ ಇವರು, ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಚಿನ್ ಅವರು ತಮ್ಮ ಮೊದಲ ಮೂರು ಪ್ರಯತ್ನಗಳಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. ಅವರು ಛಲ ಬಿಡದೆ ೨೦೨೪ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.
ಗ್ರಾಮೀಣ ಭಾಗದ ಹಿನ್ನೆಲೆಯಿಂದ ಬಂದು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾ ಯುಪಿಎಸ್ಸಿಯನ್ನು ಎದುರಿಸುವ ಆಕಾಂಕ್ಷಿಗಳಿಗೆ, ಸಚಿನ್ ಅವರ ಯಶೋಗಾಥೆಯು ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ, ಏಕಾಗ್ರತೆ ಮತ್ತು ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಚಿನ್ ಅವರು ನಿರೂಪಿಸಿದ್ದಾರೆ.