ಬೆಂಗಳೂರು, ಜು. 24 (DaijiworldNews/AA): ಕರ್ನಾಟಕದ ಹಲವು ಭಾಗಗಳಲ್ಲಿ ಈ ವಾರ ಮಾತ್ರವಲ್ಲದೆ ಮುಂದಿನ ವಾರವೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಜುಲೈ 24ರ ಸಂಜೆಯಿಂದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಭಾರಿ ಅಥವಾ ಅತಿಭಾರಿ ಮಳೆಯಾಗುವ ಸಾಧ್ಯತೆ ಇದೆ. 64.5 ಮಿ.ಮೀ. - 115.4 ಮಿ.ಮೀ.ವರೆಗೆ ಹಾಗೂ ಕೆಲವು ಪ್ರದೇಶಗಳಲ್ಲಿ 204 ಮಿ.ಮೀ.ವರೆಗೂ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಮೂರು ಕರಾವಳಿ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಜುಲೈ 25ರಿಂದ 30ರವರೆಗೆ ಕರಾವಳಿಯ ಈ ಮೂರು ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜುಲೈ 24, 25, 28, 29 ಹಾಗೂ 30ರಂದು, ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಜುಲೈ 24, 28, 29 ಹಾಗೂ 30ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ 64.5 ಮಿ.ಮೀ.ದಿಂದ 115.4 ಮಿ.ಮೀ.ವರೆಗೆ ಮಳೆಯಾಗುವ ನಿರೀಕ್ಷೆ ಇರುವುದರಿಂದ ಸಂಬಂಧಿತ ದಿನಾಂಕಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.