ನವದೆಹಲಿ, ಜು. 24 (DaijiworldNews/AA): ಧರ್ಮೇಂದ್ರ ಪ್ರಧಾನ್ ಅವರನ್ನ ವಜಾಗೊಳಿಸುವವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಲೋಕಸಭೆ ಕಲಾಪ ಸೋಮವಾರದ ವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಸಂಸತ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಧರ್ಮೇಂದ್ರ ಪ್ರಧಾನ್ ಅವರನ್ನ ವಜಾಗೊಳಿಸುವವರೆಗೆ ಸಂಸತ್ತಿನ ಯಾವುದೇ ಚರ್ಚೆಗಳಲ್ಲಿ ವಿಪಕ್ಷಗಳು ಭಾಗವಹಿಸುವುದಿಲ್ಲ" ಎಂದಿದ್ದಾರೆ. ಜೊತೆಗೆ ಮೂರು ಮುಖ್ಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
"ವಿದ್ಯಾರ್ಥಿಗಳು ಮೂರು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭ್ರಷ್ಟ ಶಿಕ್ಷಣ ಸಚಿವರನ್ನ ವಜಾಗೊಳಿಸಬೇಕು, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆಯಾಚಿಸಬೇಕು. ಈ ಬೇಡಿಕೆ ಈಡೇರಿಸುವವರೆಗೆ ಯಾವುದೇ ಚರ್ಚೆ ಸಾಧ್ಯ ಇಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.