ನವದೆಹಲಿ, 24 (DaijiworldNews/AK): ದೇಶದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಹಾಲಿ ಇರುವ ಕಾನೂನುಗಳನ್ನು ಮತ್ತಷ್ಟು ಕಠಿಣಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿಅವರು ಶುಕ್ರವಾರ ಪ್ರಶ್ನೆಪತ್ರಿಕೆ ಸೋರಿಕೆ ವಿಷಯದ ಕುರಿತು ವಿಡಿಯೋ ಸಂದೇಶ ರವಾನಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸರ್ಕಾರವು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ 2024ಕ್ಕೆ ತಿದ್ದುಪಡಿ ತರಲು ಯೋಜಿಸಿದೆ. ಈ ಪ್ರಸ್ತಾವಿತ ತಿದ್ದುಪಡಿಗಳಿಗೆ ಶುಕ್ರವಾರ ನಡೆಯಲಿರುವ ಕೇಂದ್ರ ಸಚಿವರ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರ ಘೋಷಣೆಯಂತೆ, ಪರೀಕ್ಷಾ ಸೋರಿಕೆ ಪ್ರಕರಣಗಳ ಶೀಘ್ರ ತನಿಖೆ ಮತ್ತು ವಿಚಾರಣೆಗಾಗಿ ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ಗಳನ್ನು ಸ್ಥಾಪಿಸುವ ನಿಬಂಧನೆಯನ್ನು ಸಹ ಕಾಯ್ದೆಯಲ್ಲಿ ಸೇರಿಸಲಾಗುತ್ತದೆ.
ಪ್ರಸ್ತುತ ವೈಯಕ್ತಿಕ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಹೊಸ ತಿದ್ದುಪಡಿಯ ಪ್ರಕಾರ ಶಿಕ್ಷೆಯ ಅವಧಿಯನ್ನು 5 ರಿಂದ 10 ವರ್ಷಗಳ ಜೈಲು ಶಿಕ್ಷೆಗೆ ಹೆಚ್ಚಿಸಲಾಗುತ್ತಿದ್ದು, ದಂಡದ ಪ್ರಮಾಣವನ್ನು 1 ಕೋಟಿ ರೂ.ರೆಗೆ ಏರಿಸಲು ಉದ್ದೇಶಿಸಲಾಗಿದೆ.