ಗ್ಯಾಂಗ್ಟಾಕ್, ಜು. 22 (DaijiworldNews/AA): ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಮೀಥೇನ್ ಅನಿಲ ಸ್ಫೋಟಗೊಂಡು ಸಂಭವಿಸಿದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಜುಲೈ 20ರಂದು ಮಧ್ಯಾಹ್ನ ಸಮರ್ದುಂಗ್ನಲ್ಲಿರುವ ಎನ್ಎಚ್ಪಿಸಿ ತೀಸ್ತಾ ಸ್ಟೇಜ್-6 ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿತ್ತು. ಪರಿಣಾಮ 25 ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದು, ಇದೀಗ ಈ ಪೈಕಿ 20 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಸುರಂಗದ ಒಳಗಿದ್ದ ಬಂಡೆಗಳ ನಡುವಿದ್ದ ಮೀಥೇನ್ ಅನಿಲವು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಇದರ ಪರಿಣಾಮವಾಗಿ ಸುರಂಗದೊಳಗೆ ದಟ್ಟವಾದ ವಿಷಕಾರಿ ಹೊಗೆ ಮತ್ತು ಅನಿಲ ಆವರಿಸಿಕೊಂಡು ಕಾರ್ಮಿಕರು ಉಸಿರುಗಟ್ಟಿ ಹಾಗೂ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಎನ್ಎಚ್ಪಿಸಿ ಮಾಹಿತಿ ನೀಡಿದೆ.
ಪ್ರಧಾನಿ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ. ಸಿಕ್ಕಿಂ ಸಿಎಂ ಪ್ರೇಮ್ ಸಿಂಗ್ ತಮಾಂಗ್ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ.ಪರಿಹಾರ ಘೋಷಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ ನಡೆಸಿದ ಸಿಎಂ ತಮಾಂಗ್, "ಸುರಂಗದೊಳಗಿನ ಆಕ್ಸಿಜನ್ ಕೊರತೆ ನಿವಾರಣೆ ಮತ್ತು ವಿಷಕಾರಿ ಅನಿಲವನ್ನು ತೆರವುಗೊಳಿಸಲು ನೆರೆಯ ಪಶ್ಚಿಮ ಬಂಗಾಳದಿಂದ ವಿಶೇಷ ಗಣಿಗಾರಿಕೆ ರಕ್ಷಣಾ ತಂಡ ಕರೆಸಲಾಗಿದೆ. ಈ ಸ್ಫೋಟದ ನಿಖರ ಕಾರಣವನ್ನು ಪತ್ತೆಹಚ್ಚಲು ವಿಶೇಷ ತನಿಖಾ ಸಮಿತಿ ರಚಿಸಲಾಗುವುದು" ಎಂದಿದ್ದಾರೆ.