ನವದೆಹಲಿ, ಜು. 21 (DaijiworldNews/AA): ವಿದ್ಯಾರ್ಥಿಗಳ ಥಳಿಸುವುದು ಭಾರತೀಯ ಸಂಸ್ಕೃತಿಯಲ್ಲ. ಧರ್ಮೇಂದ್ರ ಪ್ರಧಾನ್ ಜೊತೆಗೆ ಗೃಹ ಸಚಿವ ಅಮಿತ್ ಶಾ., ಪ್ರಧಾನಿ ನರೇಂದ್ರ ಮೋದಿ ಕೂಡ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಆಗ್ರಹಸಿದ್ದಾರೆ.

ಈ ಕುರಿತು ಸಂಸತ್ ಭವನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಅವರು, "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಆದರೆ, ವಿದ್ಯಾರ್ಥಿಗಳನ್ನು ಥಳಿಸಿದ್ದು ಅವರು ಅಲ್ಲ, ಗೃಹ ಸಚಿವ ಅಮಿತ್ ಶಾ. ಆದ್ದರಿಂದ ಅವರೂ ರಾಜೀನಾಮೆ ನೀಡಬೇಕು. ಗೃಹ ಸಚಿವರು ಪ್ರಧಾನಿಗೆ ವರದಿ ಮಾಡುತ್ತಾರೆ. ಹೀಗಾಗಿ ಪ್ರಧಾನಿ ಮೋದಿಯೂ ರಾಜೀನಾಮೆ ನೀಡಬೇಕು" ಎಂದು ಕಿಡಿಕಾರಿದರು.
"ಪ್ರಧಾನಿ ಮೋದಿ ಅವರು ದೇಶದ ವಿದ್ಯಾರ್ಥಿಗಳಲ್ಲಿ ತಕ್ಷಣ ಕ್ಷಮೆಯಾಚಿಸಬೇಕು ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ರಾಜೀನಾಮೆ ನೀಡಬೇಕು. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಸಂಪೂರ್ಣವಾಗಿ ಭಾರತೀಯ ಮೌಲ್ಯಗಳಿಗೆ ವಿರುದ್ಧವಾದದ್ದು" ಎಂದು ವಾಗ್ದಾಳಿ ನಡೆಸಿದರು.
"ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ತಿಳಿಸಿದ್ದೆ. ಆದರೆ 'ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಸರ್ಕಾರದ ಅನುಮತಿ ಪಡೆಯಬೇಕಿದೆ' ಎಂದು ಸ್ಪೀಕರ್ ಹೇಳಿದರು. ಅಂದರೆ ಸಂಸತ್ತಿನಲ್ಲಿ ಚರ್ಚೆ ನಡೆಸಲೂ ಸರ್ಕಾರದ ಅನುಮತಿ ಬೇಕೇ?" ಎಂದು ಕೇಳಿದರು.
"ದೇಶದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯ ವೈಫಲ್ಯವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಪರೀಕ್ಷಾ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪರೀಕ್ಷಾ ವ್ಯವಸ್ಥೆಯನ್ನು ಗೆದ್ದಲುಗಳು ತಿಂದಂತಾಗಿದೆ. ವಿದ್ಯಾರ್ಥಿಗಳು ಇದೇ ವಿಷಯವನ್ನು ಹೇಳುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ?" ಎಂದು ಅವರು ಪ್ರಶ್ನೆ ಮಾಡಿದರು.
"ಈ ವಿಚಾರದ ಬಗ್ಗೆ ನಾವು ಹಲವು ಬಾರಿ ವಿವರಿಸಿದ್ದೇವೆ. ಆದರೆ, ಪ್ರಧಾನಿ ಮೋದಿ ಏಕೆ ಮೌನವಾಗಿದ್ದಾರೆ? ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಬೇಕು. ವಿದ್ಯಾರ್ಥಿಗಳನ್ನು ಪೊಲೀಸರು ಥಳಿಸುವಂತಹ ಪರಿಸ್ಥಿತಿ ತಕ್ಷಣ ನಿಲ್ಲಬೇಕು" ಎಂದು ಹೇಳಿದರು.