ತಿರುಮಲ,ಜು. 21 (DaijiworldNews/AK): ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ಶೀಘ್ರ ಹಾಗೂ ಸುಲಭವಾಗಿ ಆಹಾರ-ಪಾನೀಯ ತಲುಪಿಸಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಒಂದು ಹೊಸ ತಂತ್ರಜ್ಞಾನಾಧಾರಿತ ಹೆಜ್ಜೆಯನ್ನಿಟ್ಟಿದೆ.

ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಭಕ್ತರಿಗೆ ‘ಆಹಾರ ಪೂರೈಸುವ ಕನ್ವೇಯರ್ ವ್ಯವಸ್ಥೆ’ಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಸಾಮಾನ್ಯ ದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಪ್ರತಿದಿನ ಲಕ್ಷಕ್ಕೂ ಹೆಚ್ಚು ಭಕ್ತರು ಕಿಲೋಮೀಟರ್ಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಾರೆ. ಇಂತಹ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರಳವಾಗಿ ಪ್ರಸಾದ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪ್ರಸ್ತುತ ಟಿಟಿಡಿಯ ಆಕ್ಟೋಪಸ್ ಕಟ್ಟಡದಿಂದ ಕೃಷ್ಣ ತೇಜ ಅತಿಥಿ ಗೃಹದವರೆಗೆ ಸುಮಾರು 3.5 ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 11:00 ರವರೆಗೆ ನಿರಂತರವಾಗಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಸುಮಾರು 100 ಶ್ರೀವಾರಿ ಸೇವಕರು ಪ್ರತಿದಿನ ಭಕ್ತರಿಗೆ ಹಾಲು, ಮಜ್ಜಿಗೆ ಹಾಗೂ ಕುಡಿಯುವ ನೀರು, ಉಪ್ಮಾ, ಸಾಂಬಾರ್ ಅನ್ನ ಹಾಗೂ ಟೊಮೆಟೊ ಭಾತ್ಗಳನ್ನು ವಿತರಿಸುತ್ತಿದ್ದಾರೆ.
ಇದೀಗ ಮಾನವ ಶ್ರಮವನ್ನು ಕಡಿಮೆ ಮಾಡಿ, ಯಂತ್ರಗಳ ಸಹಾಯದಿಂದ ಪ್ರಸಾದ ವಿತರಣೆಯನ್ನು ಇನ್ನಷ್ಟು ವೇಗಗೊಳಿಸಲು ದಾನಿಗಳ ನೆರವಿನಿಂದ ಈ ‘ಚಲಿಸುವ ಊಟದ’ ವ್ಯವಸ್ಥೆಯನ್ನು ರೂಪಿಸಲಾಗಿದೆ. ಪ್ರಸ್ತುತ, ಶಿಲಾ ತೋರಣಂ ಬಳಿಯ ಗೇಟ್ 45ರಲ್ಲಿ ಈ ಕನ್ವೇಯರ್ ಯಂತ್ರದ ಕಾರ್ಯನಿರ್ವಹಣೆಯನ್ನು TTD ಅಧಿಕಾರಿಗಳು ಪ್ರಾಯೋಗಿಕವಾಗಿ ಪರಿಶೀಲಿಸುತ್ತಿದ್ದಾರೆ. ಶ್ರೀವಾರಿ ಸೇವಕರು ಈ ಯಂತ್ರದ ಸಹಾಯದಿಂದ ಭಕ್ತರಿಗೆ ಸಲೀಸಾಗಿ ಪ್ರಸಾದವನ್ನು ತಲುಪಿಸುತ್ತಿದ್ದಾರೆ.
ಸುಮಾರು 3.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಆಹಾರ ಸರ್ವಿಂಗ್ ಕನ್ವೇಯರ್ನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದರೆ, ಸರತಿ ಸಾಲಿನ ಉಳಿದ ಪ್ರಮುಖ ಪ್ರದೇಶಗಳಿಗೂ ಇದನ್ನು ವಿಸ್ತರಿಸಲು ಟಿಟಿಡಿ ಯೋಜಿಸಿದೆ.