ಗ್ಯಾಂಗ್ಟಾಕ್, ಜು. 21 (DaijiworldNews/TA): ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗ ಕುಸಿದು ಭೀಕರ ದುರಂತ ಸಂಭವಿಸಿದ್ದು, ಕನಿಷ್ಠ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವು ಕಾರ್ಮಿಕರು ಇನ್ನೂ ಸುರಂಗದೊಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗುತ್ತಿದೆ.

ಸಮರ್ಡುಂಗ್ (ಜೋಲುಂಗೆ) ಪ್ರದೇಶದಲ್ಲಿ ರಾಷ್ಟ್ರೀಯ ಜಲವಿದ್ಯುತ್ ನಿಗಮದ ತೀಸ್ತಾ ಸ್ಟೇಜ್-6 ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಸುರಂಗದಲ್ಲಿ ಈ ದುರ್ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸುರಂಗದೊಳಗೆ ಮೀಥೇನ್ ಅನಿಲ ಸ್ಫೋಟಗೊಂಡ ಬಳಿಕ ಭೂಕುಸಿತ ಉಂಟಾಗಿ ಪ್ರವೇಶ ದ್ವಾರ ಸಂಪೂರ್ಣ ಮುಚ್ಚಿಕೊಂಡಿದೆ.
ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಇದುವರೆಗೆ ಏಳು ಮೃತದೇಹಗಳನ್ನು ಹೊರತೆಗೆದು ಸಿಂಗ್ತಾಮ್, ಗ್ಯಾಂಗ್ಟಾಕ್ ಹಾಗೂ ನಾಮ್ಚಿ ಜಿಲ್ಲಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ದುರಂತ ಸಂಭವಿಸಿದ ವೇಳೆ ಸುರಂಗದೊಳಗೆ ಕೆಲಸ ಮಾಡುತ್ತಿದ್ದ 18ರಿಂದ 27 ಕಾರ್ಮಿಕರು ಇನ್ನೂ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅಧಿಕಾರಿಗಳ ಪ್ರಕಾರ, ಸುರಂಗದೊಳಗೆ ಸುಮಾರು 1.5 ಕಿಲೋಮೀಟರ್ ಆಳದಲ್ಲಿ ನೈಸರ್ಗಿಕವಾಗಿ ಶೇಖರಣೆಯಾಗಿದ್ದ ಮೀಥೇನ್ ಅನಿಲವನ್ನು ಹೊರಹಾಕುವ ಕಾರ್ಯ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಭೂಕುಸಿತ ಉಂಟಾಗಿ ಸುರಂಗದ ಪ್ರವೇಶ ಮಾರ್ಗವೇ ಸಂಪೂರ್ಣವಾಗಿ ಬಂದ್ ಆಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸುರಂಗದೊಳಗೆ ಆಮ್ಲಜನಕದ ಕೊರತೆ, ದಟ್ಟ ಹೊಗೆ ಹಾಗೂ ವಿಷಕಾರಿ ಅನಿಲದ ಪ್ರಮಾಣ ಹೆಚ್ಚಿರುವುದರಿಂದ ರಕ್ಷಣಾ ಸಿಬ್ಬಂದಿಗೂ ಕಾರ್ಯಾಚರಣೆ ಸವಾಲಿನದ್ದಾಗಿದೆ. ಗ್ಯಾಸ್ ಮಾಸ್ಕ್ ಹಾಗೂ ವಿಶೇಷ ಸುರಕ್ಷತಾ ಸಾಧನಗಳನ್ನು ಧರಿಸಿ ಸಿಬ್ಬಂದಿ ಒಳಪ್ರವೇಶಿಸಿ ಸಿಲುಕಿರುವವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಅನಿಲ ಸೋರಿಕೆ ಸಂಭವಿಸಿದ ಬಳಿಕ ಈ ದುರ್ಘಟನೆ ನಡೆದಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.