ಪಂಜಾಬ್, ಜು. 21 (DaijiworldNews/AA): ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ನಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಬಹುದು ಎಂಬುದಕ್ಕೆ ಯುಪಿಎಸ್ಸಿ ಪರೀಕ್ಷೆಯಲ್ಲಿ 15ನೇ ರ್ಯಾಂಕ್ ಪಡೆದ ಸಿಮ್ರಂದೀಪ್ ಕೌರ್ ಉದಾಹರಣೆಯಾಗಿದ್ದಾರೆ.

ಸಿಮ್ರಂದೀಪ್ ಕೌರ್ ಅವರು ಪಂಜಾಬ್ನ ಪಟಿಯಾಲಾ ಜಿಲ್ಲೆಯ ನಾಭಾ ತಹಸಿಲ್ನ ಬಿರಾರ್ವಾಲ್ ಗ್ರಾಮದವರು. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಸಿಮ್ರಂದೀಪ್ ಅವರ ಸಾಧನೆ ಪರಿಶ್ರಮ, ತಾಳ್ಮೆ ಮತ್ತು ಅಚಲ ಆತ್ಮವಿಶ್ವಾಸದ ಪ್ರತೀಕವಾಗಿದೆ. ಅವರ ಯಶಸ್ಸು ಕುಟುಂಬ ಹಾಗೂ ಗ್ರಾಮಕ್ಕೆ ಹೆಮ್ಮೆ ತಂದಿರುವುದಲ್ಲದೆ, ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಹೊಸ ಸ್ಪೂರ್ತಿಯಾಗಿದೆ.
ಸಿಮ್ರಂದೀಪ್ ಅವರು ಖಾಲ್ಸಾ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. 2025ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 15 ನೇ ಅಖಿಲ ಭಾರತ ರ್ಯಾಂಕ್ ಗಳಿಸುತ್ತಾರೆ. ಯುಪಿಎಸ್ಸಿಯಲ್ಲಿ ಅಗ್ರ ಸ್ಥಾನ ಗಳಿಸುವ ಮೂಲಕ ಅವರು ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡಿದ್ದಾರೆ.
"ನಾನು ಗ್ರಾಮದಲ್ಲಿ ಬೆಳೆದ ಹುಡುಗಿ. ಗ್ರಾಮೀಣ ಜನರು ಎದುರಿಸುವ ಸಮಸ್ಯೆಗಳು ನನಗೆ ಚೆನ್ನಾಗಿ ತಿಳಿದಿವೆ. ಹಳ್ಳಿಗಳ ಅಭಿವೃದ್ಧಿಗಾಗಿ ಕೆಲಸ ಮಾಡುವುದರ ಜೊತೆಗೆ ಅಲ್ಲಿನ ಜನರ ಜೀವನಮಟ್ಟ ಸುಧಾರಿಸಲು ನನ್ನಿಂದ ಸಾಧ್ಯವಾದ ಕೊಡುಗೆ ನೀಡಲು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.