ಲಕ್ನೋ,ಜು. 20 (DaijiworldNews/AK): ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಿ.ಟೆಕ್ ಗೋಲ್ಡ್ ಮೆಡಲಿಸ್ಟ್ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಲವು ಪ್ರಯತ್ನಗಳ ನಂತರವೂ ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ತಂದೆಗೆ ಕ್ಷಮೆಯಾಚಿಸಿದ್ದಾನೆ.

ಮೃತನನ್ನು ಆನಂದ್ ಕುಮಾರ್ (23) ಎಂದು ಗುರುತಿಸಲಾಗಿದೆ. 2024ರಲ್ಲಿ ಕಾನ್ಪುರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಉತ್ತರ ಪ್ರದೇಶಕ್ಕೆ ಮೂರನೇ ರ್ಯಾಂಕ್ ಪಡೆದಿದ್ದ. ಅಲ್ಲದೇ ಕಾಲೇಜಿನ ಸಮಾರಂಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರಿಂದ ಚಿನ್ನದ ಪದಕ ಪಡೆದಿದ್ದ ಎಂದು ತಿಳಿದುಬಂದಿದೆ.
ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಮೃತನ ಹಿರಿಯ ಸಹೋದರನ ಮದುವೆ ನಿಶ್ಚಯಿಸಲು ಕುಟುಂಬಸ್ಥರೆಲ್ಲರು ತಮ್ಮ ಸ್ವಂತ ಊರು ಬಿಹಾರಕ್ಕೆ ತೆರಳಿದ್ದರು. ಈ ವೇಳೆ ಕೆಲಸದಾಕೆ ಬಂದು ಮನೆ ಬಾಗಿಲು ತಟ್ಟಿದರೂ ಆನಂದ್ ತೆರೆಯದಿದ್ದಾಗ, ಅವರು ನೆರೆಹೊರೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಐದು ಸಾಲುಗಳಲ್ಲಿ ಬರೆದಿರುವ ಡೆತ್ನೋಟ್ ಪತ್ತೆಯಾಗಿದೆ.