ರಾಜಸ್ಥಾನ, ಜು. 20 (DaijiworldNews/TA): ಕೋಟಾ ನಗರದ ಬೋರ್ಖೇಡಾ ಪ್ರದೇಶದಲ್ಲಿರುವ ಬಾಲಕರ ಹಾಸ್ಟೆಲ್ನ ಊಟದ ಕೋಣೆಯೊಳಗೆ ಸುಮಾರು ನಾಲ್ಕು ಅಡಿ ಉದ್ದದ ಮೊಸಳೆಯೊಂದು ನುಗ್ಗಿದ ಘಟನೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ. ಈ ಸಂಪೂರ್ಣ ಘಟನೆ ಹಾಸ್ಟೆಲ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹಾಸ್ಟೆಲ್ನ ನೆಲಮಾಳಿಗೆಯಲ್ಲಿರುವ ಊಟದ ಕೋಣೆಯಲ್ಲಿ ಮೊಸಳೆ ಕಾಣಿಸಿಕೊಂಡ ತಕ್ಷಣ ವಿದ್ಯಾರ್ಥಿಗಳು ಭಯಭೀತರಾಗಿ ಹೊರಗೆ ಓಡಿ ಬಂದಿದ್ದಾರೆ. ಸಿಬ್ಬಂದಿಯೂ ಕೂಡ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮೊಸಳೆಯನ್ನು ಯಾವುದೇ ಅಪಾಯವಾಗದಂತೆ ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ. ಬಳಿಕ ಅದನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಮೊಸಳೆಯು ಸಮೀಪದ ಚರಂಡಿ ಅಥವಾ ಒಳಚರಂಡಿ ಮಾರ್ಗದ ಮೂಲಕ ದಾರಿ ತಪ್ಪಿ ಹಾಸ್ಟೆಲ್ ಆವರಣಕ್ಕೆ ಪ್ರವೇಶಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಹಾಸ್ಟೆಲ್ನೊಳಗೆ ಮೊಸಳೆ ಕಾಣಿಸಿಕೊಂಡ ದೃಶ್ಯ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದ್ದು, ಸಿಸಿಟಿವಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಘಟನೆ ಬಳಿಕ ಹಾಸ್ಟೆಲ್ ಸುತ್ತಮುತ್ತಲಿನ ಚರಂಡಿಗಳನ್ನು ಪರಿಶೀಲಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.