ನವದೆಹಲಿ, ಜು. 20 (DaijiworldNews/AK): ಸಂಸತ್ತಿನ ಮುಂಗಾರು ಅಧಿವೇಶನ ದ ಮೊದಲ ದಿನವಾದ ಇಂದು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ತಿದ್ದುಪಡಿ ಮಸೂದೆ, 2026’ ಅನ್ನು ಯಶಸ್ವಿಯಾಗಿ ಮಂಡಿಸಿದರು.

ಈ ಮಸೂದೆಯು 1956 ರ ಸುಪ್ರೀಂ ಕೋರ್ಟ್ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ಸೇರಿದಂತೆ ಸುಪ್ರೀಂ ಕೋರ್ಟ್ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 34 ರಿಂದ 38 ಕ್ಕೆ ಹೆಚ್ಚಿಸಲಿದೆ.
ಸುಗ್ರೀವಾಜ್ಞೆಯ ಬದಲಿಗೆ ಶಾಶ್ವತ ಕಾಯ್ದೆ ಕಳೆದ ಮೇ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿತ್ತು. ನಂತರ ರಾಷ್ಟ್ರಪತಿ ಈ ಕುರಿತು ವಿಶೇಷ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದರು. ಈಗ ಆ ತಾತ್ಕಾಲಿಕ ಸುಗ್ರೀವಾಜ್ಞೆಯ ಜಾಗದಲ್ಲಿ ಸಂಸತ್ತಿನ ಶಾಶ್ವತ ಕಾಯ್ದೆಯನ್ನು ತರಲು ಈ ಮಸೂದೆಯನ್ನು ಪರಿಚಯಿಸಲಾಗಿದೆ.
ಪ್ರಸ್ತುತ ಸುಪ್ರೀಂ ಕೋರ್ಟ್ನಲ್ಲಿ ಸಿಜೆಐ ಸೇರಿದಂತೆ 32 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹೊಸ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡರೆ, ಪೂರ್ಣಪ್ರಮಾಣದ ಕಾರ್ಯನಿರ್ವಾಹಕ ಬಲ 38 ಕ್ಕೆ ಏರಿಕೆಯಾಗಲಿದೆ.
ಭಾರತೀಯ ಸಂವಿಧಾನದ 124 ನೇ ವಿಧಿಯ ಪ್ರಕಾರ, ಸುಪ್ರೀಂ ಕೋರ್ಟ್ಗೆ ಅಗತ್ಯವಿರುವ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಕಾನೂನಿನ ಮೂಲಕ ಹೆಚ್ಚಿಸುವ ಸಂಪೂರ್ಣ ಅಧಿಕಾರ ಸಂಸತ್ತಿಗೆ ಇದೆ. ಈ ಹಿಂದೆ 2019 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂತರ್ತಗಳ ಸಂಖ್ಯೆಯನ್ನು 31 ರಿಂದ 34 ಕ್ಕೆ ಹೆಚ್ಚಿಸಲಾಗಿತ್ತು. ಇದೀಗ 7 ವರ್ಷಗಳ ನಂತರ ಮತ್ತೆ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.