ಮಧುರೈ, ಜು. 20 (DaijiworldNews/TA): ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದ ನಿರ್ದೇಶನದಂತೆ ಮಧುರೈ ಜಿಲ್ಲೆಯ ಕೆಕೆ ನಗರದಲ್ಲಿದ್ದ 44 ವರ್ಷಗಳ ಇತಿಹಾಸ ಹೊಂದಿದ್ದ 'ಪೆರಿಯಾರ್ ತೋರಣ ವಾಯಿಲ್' (ಪ್ರವೇಶ ಕಮಾನು) ಅನ್ನು ಶನಿವಾರ ಮಧ್ಯರಾತ್ರಿ ಭಾರೀ ಪೊಲೀಸ್ ಭದ್ರತೆಯಲ್ಲಿ ಜಿಲ್ಲಾಡಳಿತ ಧ್ವಂಸಗೊಳಿಸಿದೆ.

1981ರಲ್ಲಿ ನಡೆದ ಐದನೇ ವಿಶ್ವ ತಮಿಳು ಸಮ್ಮೇಳನದ ಅಂಗವಾಗಿ ನಿರ್ಮಿಸಲಾಗಿದ್ದ ಈ ಕಮಾನು, ಹಲವು ವರ್ಷಗಳಿಂದ ನಗರದ ಪ್ರಮುಖ ಹೆಗ್ಗುರುತಾಗಿತ್ತು. ಆದರೆ, ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ರಸ್ತೆ ಸುರಕ್ಷತೆ ದೃಷ್ಟಿಯಿಂದ ಇದನ್ನು ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು.
ಮಧ್ಯರಾತ್ರಿ ಕಾರ್ಯಾಚರಣೆ : ಕಮಾನು ಧ್ವಂಸ ಕಾರ್ಯಾಚರಣೆಗಾಗಿ ರಾತ್ರಿ 12 ಗಂಟೆ ಸುಮಾರಿಗೆ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆಂಬ್ಯುಲೆನ್ಸ್, ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕರ ಸುರಕ್ಷತೆಗಾಗಿ ಕಮಾನು ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ, ಸಂಚಾರವನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿತ್ತು. ರಾತ್ರಿ ಸುಮಾರು 12.30ಕ್ಕೆ ಜೆಸಿಬಿ ಯಂತ್ರಗಳ ಮೂಲಕ ಕಮಾನು ಕೆಡವುವ ಕಾರ್ಯ ಆರಂಭಗೊಂಡು ಕೆಲವೇ ಗಂಟೆಗಳಲ್ಲಿ ಪೂರ್ಣಗೊಂಡಿತು.
ಮಟ್ಟುತಾವಣಿಯ ಎಂಜಿಆರ್ ಬಸ್ ನಿಲ್ದಾಣ, ವಿಲ್ಲಾಪುರಂ ಸಮೀಪದ ತೇರ್ಕುವಾಸಲ್–ವಿಮಾನ ನಿಲ್ದಾಣ ರಸ್ತೆ ಹಾಗೂ ವಿರಾಟ್ತಿಪಾತು ಬಳಿಯ ಥೇಣಿ ರಸ್ತೆಯಲ್ಲಿರುವ ಪ್ರವೇಶ ಕಮಾನುಗಳು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿವೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ, ಕೆಕೆ ನಗರದ ಪೆರಿಯಾರ್ ತೋರಣ ವಾಯಿಲ್ ಸೇರಿದಂತೆ ಸಂಚಾರಕ್ಕೆ ಅಡ್ಡಿಯಾಗುವ ಪ್ರವೇಶ ಕಮಾನುಗಳನ್ನು ತೆರವುಗೊಳಿಸುವಂತೆ ಮಧುರೈ ಮಹಾನಗರ ಪಾಲಿಕೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಕಳೆದ 15 ವರ್ಷಗಳಲ್ಲಿ ಮಧುರೈ ನಗರದಲ್ಲಿ ಹೊಸ ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು ಮತ್ತು ಮದ್ರಾಸ್ ಹೈಕೋರ್ಟ್ ಮಧುರೈ ಪೀಠದ ಕಾರ್ಯಾರಂಭದಿಂದ ವಾಹನಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಕಾಂಕ್ರೀಟ್ನಿಂದ ನಿರ್ಮಿಸಲಾದ ಈ ಕಮಾನುಗಳು ರಸ್ತೆಯ ಗಮನಾರ್ಹ ಭಾಗವನ್ನು ಆಕ್ರಮಿಸಿಕೊಂಡಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿತ್ತು. ಪ್ರಮುಖ ಜಂಕ್ಷನ್ಗಳಲ್ಲಿ ಅವು ಕೃತಕ ಅಡಚಣೆಗಳನ್ನು ಉಂಟುಮಾಡಿ ರಸ್ತೆ ಸುರಕ್ಷತಾ ಮಾನದಂಡಗಳಿಗೂ ಧಕ್ಕೆ ತಂದಿವೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಅಲ್ಲದೆ, ಕಮಾನುಗಳ ಸುತ್ತ ಅನಧಿಕೃತ ವಾಹನ ನಿಲುಗಡೆಯೂ ಸಂಚಾರ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತಿತ್ತು. 2025ರ ಫೆಬ್ರವರಿಯಲ್ಲಿ ಮಟ್ಟುತಾವಣಿಯ ಎಂಜಿಆರ್ ಬಸ್ ನಿಲ್ದಾಣದ ಸಮೀಪದ 'ನಕ್ಕೀರರ್ ತೋರಣ ವಾಯಿಲ್' ಕಮಾನು ತೆರವುಗೊಳಿಸುವ ವೇಳೆ ಅದರ ಒಂದು ಭಾಗ ವಾಹನದ ಮೇಲೆ ಬಿದ್ದು ಮಣ್ಣು ತೆಗೆಯುವ ಯಂತ್ರದ ಚಾಲಕ ಮೃತಪಟ್ಟಿದ್ದರು. ಬಳಿಕ ಮೃತರ ಕುಟುಂಬಕ್ಕೆ ರೂ.17 ಲಕ್ಷ ಪರಿಹಾರ ನೀಡುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿತ್ತು.
ಈ ಘಟನೆ ನಂತರ ಪ್ರವೇಶ ಕಮಾನುಗಳ ಸುರಕ್ಷತೆ ಮತ್ತು ಅವುಗಳ ಅಗತ್ಯತೆಯ ಕುರಿತು ಮತ್ತೆ ಚರ್ಚೆ ಆರಂಭವಾಗಿದ್ದು, ಇದೀಗ ಪೆರಿಯಾರ್ ತೋರಣ ವಾಯಿಲ್ ಧ್ವಂಸದೊಂದಿಗೆ ಮಧುರೈ ನಗರದ ಸಂಚಾರ ಸುಧಾರಣೆಗೆ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ.