ಬೆಂಗಳೂರು, ಜು. 20 (DaijiworldNews/TA): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಲೇ ಇರುತ್ತವೆ. ಆದರೆ, ಈ ಬಾರಿ ಟ್ರಾಫಿಕ್ ನಿಯಮ ಪಾಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಬೀದಿ ನಾಯಿಗಳ ಗುಂಪು. ಜಿಬ್ರಾ ಕ್ರಾಸಿಂಗ್ ಮೂಲಕವೇ ರಸ್ತೆ ದಾಟುತ್ತಿರುವ ನಾಯಿಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊಗೆ "ಬೆಂಗಳೂರಿನಲ್ಲಿ ಜೀಬ್ರಾ ಕ್ರಾಸಿಂಗ್ ಬಳಸುತ್ತಿರುವ ಡೋಗೇಶ್" ಎಂಬ ತಮಾಷೆಯ ಶೀರ್ಷಿಕೆ ನೀಡಲಾಗಿದೆ. ಕೆಲವೇ ಸೆಕೆಂಡುಗಳ ಈ ವಿಡಿಯೊ ಸಾವಿರಾರು ವೀಕ್ಷಣೆಗಳನ್ನು ಪಡೆದು ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ವೀಡಿಯೊದಲ್ಲಿ ವಾಹನಗಳ ಸಂಚಾರವನ್ನು ಗಮನಿಸಿದ ಬೀದಿ ನಾಯಿಗಳ ಗುಂಪು, ರಸ್ತೆ ಮಧ್ಯೆ ಎಲ್ಲಿಂದ ಬೇಕಾದರೂ ದಾಟದೆ, ಪಾದಚಾರಿಗಳಿಗಾಗಿ ಮೀಸಲಾದ ಜಿಬ್ರಾ ಕ್ರಾಸಿಂಗ್ ಮೂಲಕವೇ ಕ್ರಮಬದ್ಧವಾಗಿ ರಸ್ತೆ ದಾಟುತ್ತಿರುವುದು ಕಾಣಿಸುತ್ತದೆ. ಈ ದೃಶ್ಯ ಹಲವರ ಗಮನ ಸೆಳೆದಿದ್ದು, ಟ್ರಾಫಿಕ್ ನಿಯಮಗಳ ಪಾಲನೆಗೆ ಉತ್ತಮ ಉದಾಹರಣೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ವೀಡಿಯೊ ನೋಡಿದ ಹಲವರು ಆಸಕ್ತಿದಾಯಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. "ಈ ನಾಯಿಗಳಿಗೆ ಜೀಬ್ರಾ ಕ್ರಾಸಿಂಗ್ನ ಮಹತ್ವ ಗೊತ್ತಾಗಿದೆ. ಆದರೆ ಕೆಲವರಿಗೆ ಇನ್ನೂ ಅದು ಪಾರ್ಕಿಂಗ್ ಸ್ಥಳ ಎಂಬ ಭಾವನೆ ಇದೆ," ಎಂದು ಒಬ್ಬರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಮನುಷ್ಯರಿಗಿಂತ ಪ್ರಾಣಿಗಳಿಗೇ ರಸ್ತೆ ಶಿಸ್ತು ಮತ್ತು ಸಾರ್ವಜನಿಕ ಜಾಗದ ಅರಿವು ಹೆಚ್ಚು," ಎಂದು ಅಭಿಪ್ರಾಯಪಟ್ಟಿದ್ದಾರೆ. "ಭಾರತದ ನಾಯಿಗಳೂ ಈಗ ಟ್ರಾಫಿಕ್ ರೂಲ್ಸ್ ಪಾಲಿಸುತ್ತಿವೆ," ಎಂಬ ಕಾಮೆಂಟ್ ಕೂಡ ನೆಟ್ಟಿಗರ ಗಮನ ಸೆಳೆದಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಟ್ರಾಫಿಕ್ ಸಮಸ್ಯೆಗಳ ನಡುವೆ ವೈರಲ್ ಆಗಿರುವ ಈ ಮುದ್ದಾದ ವೀಡಿಯೊ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವಲ್ಲಿ ನೆರವಾಗುತ್ತಿದೆ. ಪ್ರಾಣಿಗಳ ಈ ಶಿಸ್ತಿನ ನಡವಳಿಕೆಯನ್ನು ನೋಡಿ ಮನುಷ್ಯರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂಬ ಸಂದೇಶವನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.