ಅಗರ್ತಲಾ, ಜು. 20 (DaijiworldNews/AA): ತ್ರಿಪುರ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಅನುರಾಗ್ ಧನಕರ್ ಅವರು ಅಗರ್ತಲಾದಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ತಮ್ಮ ಚೇಂಬರ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸೋಮವಾರ ಬೆಳಗ್ಗೆ ಡಿಜಿಪಿ ಅನುರಾಗ್ ಧನಕರ್ ಅವರು ತಮ್ಮ ಕಚೇರಿಗೆ ಆಗಮಿಸಿದ್ದರು. ಕೆಲ ಸಮಯದ ನಂತರ ಅವರ ಚೇಂಬರ್ನಿಂದ ಗುಂಡಿನ ಸದ್ದು ಕೇಳಿಬಂದಿದೆ. ಸಿಬ್ಬಂದಿ ಒಳಗೆ ಹೋಗಿ ನೋಡಿದಾಗ ಧನಕರ್ ಅವರು ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದರು. ಧನಕರ್ ಅವರು ತಮ್ಮ ಸೇವಾ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರ ತಂಡ ಪ್ರಧಾನ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.