ಬಿಹಾರ, ಜು. 20 (DaijiworldNews/AK): ದೃಢ ಸಂಕಲ್ಪ, ಸ್ಪಷ್ಟ ಗುರಿ ಮತ್ತು ನಿರಂತರ ಪರಿಶ್ರಮದ ಬಲದಿಂದ ಬಿಹಾರದ ಯಶಸ್ವಿ ರಾಜ್ ವರ್ಧನ್ ಅವರು 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಗಳಿಸಿ ಗಮನ ಸೆಳೆದಿದ್ದಾರೆ.

ಬಿಹಾರದ ಸಾರಣ್ ಜಿಲ್ಲೆ ಮೂಲದ ಯಶಸ್ವಿ ರಾಜ್ ವರ್ಧನ್ ಅವರು ಬಾಲ್ಯದಿಂದಲೇ ಮೇಧಾವಿ ವಿದ್ಯಾರ್ಥಿಯಾಗಿದ್ದರು. ಅವರು ಪಟ್ನಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಳಿಕ ದೆಹಲಿ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡಿ 2021ರಲ್ಲಿ ಪದವಿ ಪಡೆದರು. ಕಾಲೇಜು ದಿನಗಳಲ್ಲಿಯೇ ಯುಪಿಎಸ್ಸಿ ಬರೆಯವ ಆಸಕ್ತಿ ಅವರಲ್ಲಿ ಮೂಡಿತ್ತು.
ಪದವಿ ಮುಗಿದ ಕೇವಲ ಎರಡು ದಿನಗಳಲ್ಲೇ ಯಶಸ್ವಿ ಅವರು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿ ಸುಮಾರು ಮೂರು ವರ್ಷ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಆದರೆ ಯುಪಿಎಸ್ಸಿ ಪರೀಕ್ಷೆಗೆ ಸಮರ್ಪಕವಾಗಿ ಸಿದ್ಧತೆ ನಡೆಸಿದರೆ ಯಶಸ್ಸು ಸಾಧಿಸಬಹುದು ಎಂಬ ವಿಶ್ವಾಸದಿಂದ ಅವರು ಉದ್ಯೋಗದ ಜೊತೆಗೆ ಯೋಜಿತವಾಗಿ ತಯಾರಿ ಆರಂಭಿಸಿದರು.
2024ರಲ್ಲಿ ಯಶಸ್ವಿ ಅವರು ಸಂಪೂರ್ಣ ಗಮನವನ್ನು ಯುಪಿಎಸ್ಸಿ ಸಿದ್ಧತೆಯತ್ತ ಹರಿಸಿದರು. 2025ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ 11 ರ್ಯಾಂಕ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.