ಕೊಹಿಮಾ, ಜು. 19 (DaijiworldNews/AA): ಭಾರೀ ಮಳೆಯ ಹಿನ್ನೆಲೆ ನಾಗಾಲ್ಯಾಂಡ್ನ ಮಾನ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿರುವ ಸಾಧ್ಯತೆಯಿದ್ದು, ಇದುವರೆಗೆ 4 ಶವಗಳು ಪತ್ತೆಯಾಗಿವೆ.

ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾದ ಪರಿಣಾಮ ಭೂಕುಸಿತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಟ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾನ್ ಉಪ ಆಯುಕ್ತ ವೆನ್ನೈ ಕೊನ್ಯಾಕ್ ಅವರು ತಿಳಿಸಿದ್ದಾರೆ.
ಭೂಕುಸಿತದಿಂದ ಹಲವಾರು ಮನೆಗಳು ಕೊಚ್ಚಿಹೋಗಿವೆ. ಭೂಕುಸಿತದ ಬಳಿಕ ಹೆಚ್ಚಿನ ಪ್ರಮಾಣದ ನೀರು ಆ ಪ್ರದೇಶಕ್ಕೆ ನುಗ್ಗುತ್ತಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಘಟನಾ ಸ್ಥಳದಲ್ಲಿ ಸ್ವಯಂಸೇವಕರು, ಪೊಲೀಸ್ ಮತ್ತು ಸೇನಾ ಸಿಬ್ಬಂದಿ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಭೂಕುಸಿತ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ನಾಗಾಲ್ಯಾಂಡ್ ಸಿಎಂ ನೀಫಿಯು ರಿಯೊ, ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 74,000 ರೂ. ತಕ್ಷಣದ ಪರಿಹಾರ ಘೋಷಿಸಿದ್ದಾರೆ. ಸರ್ಕಾರವು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯಿಂದ ಇರಲು ನಿರ್ದೇಶಿಸಿದೆ. ಅಲ್ಲದೇ ಸಾರ್ವಜನಿಕರು ಜಾಗರೂಕರಾಗಿರಲು, ಇಳಿಜಾರುಗಳು, ನದಿ ದಂಡೆಗಳು ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರವಿರುವಂತೆ ಸೂಚನೆ ನೀಡಲಾಗಿದೆ.