ನವದೆಹಲಿ, ಜು. 19 (DaijiworldNews/AA): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ಜುಲೈ 25ರ ವರೆಗೆ ಮೂರು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದು, ಮಲ್ಡೋವಾ, ಉತ್ತರ ಮೆಸಿಡೋನಿಯಾ ಮತ್ತು ರೋಮಾನಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಜುಲೈ 20 ರಂದು ಮೊಲ್ಡೋವಾಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ, ಅಲ್ಲಿನ ತಮ್ಮ ಸಹವರ್ತಿ ಮೈಯಾಸಂದು ಅವರನ್ನು ಭೇಟಿಯಾಗಿ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಮಲ್ಡೋವಾ ಪಾರ್ಲಿಮೆಂಟ್ ನ ಅಧ್ಯಕ್ಷ ಇಗೋರ್ ಗ್ರೋಸು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದು, ಬಳಿಕ ಭಾರತೀಯ ಸಮುದಾಯ ಮತ್ತು ಉದ್ಯಮ ಒಕ್ಕೂಟದೊಂದಿಗೆ ಸಂವಾದ ನಡೆಸಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ರಾಷ್ಟ್ರಪತಿಯೊಬ್ಬರು ಮೊಲ್ಡೋವಾಕ್ಕೆ ಭೇಟಿ ನೀಡುತ್ತಿದ್ದಾರೆ.
ಮೊಲ್ಡೋವಾ ಪ್ರವಾಸದ ಜು.21 ರಂದು ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಉತ್ತರ ಮೆಸಿಡೋನಿಯಾಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ರಾಷ್ಟ್ರಪತಿ ಅಲ್ಲಿನ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಭೇಟಿ ಮಾಡಿ, ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಅಲ್ಲಿನ ಸಂಸತ್ತನ್ನು ಉದ್ದೇಶಿಸಿಯೂ ಭಾಷಣ ಮಾಡಲಿದ್ದಾರೆ. ನಂತರ ಭಾರತ ಮತ್ತು ಉತ್ತರ ಮೆಸಿಡೋನಿಯಾ ಉದ್ಯಮ ಒಕ್ಕೂಟ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಇದು ಕೂಡ ಭಾರತದ ರಾಷ್ಟ್ರಪತಿಯೊರ್ವರು ಮೆಸಿಡೋನಿಯಾಕ್ಕೆ ನೀಡುವ ಮೊದಲ ಭೇಟಿಯಾಗಲಿದೆ.
ಮೆಸಿಡೋನಿಯಾ ಪ್ರವಾಸದ ಬಳಿಕ ಕೊನೆಯದಾಗಿ ಜು. 23ರಿಂದ ರಾಷ್ಟ್ರಪತಿ ರೋಮಾನಿಯಾಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ಸಹವರ್ತಿ ಮತ್ತು ಪ್ರಧಾನಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಭಾರತೀಯ ಸಮುದಾಯದೊಂದಿಗೂ ಮಾತುಕತೆ ನಡೆಸಲಿದ್ದಾರೆ.
ರಾಷ್ಟ್ರಪತಿ ಅವರ ಈ ಪ್ರವಾಸ, ಆ ದೇಶಗಳೊಂದಿಗೆ ಭಾರತದ ದ್ವಿಪಕ್ಷೀಯ ಬಾಂಧವ್ಯ ಬಲಗೊಳಿಸುವುದು ಮತ್ತು ಪೂರ್ವ ಯುರೋಪಿಯನ್ ವಲಯದ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯದ ಸಂಕೇತವಾಗಿದೆ.