ಪೂಂಚ್, ಜು. 19 (DaijiworldNews/AA): ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಇಂದು ಕೂಡ ಮುಂದುವರಿದಿದ್ದು, ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಪರಿಣಾಮ ಕನಿಷ್ಠ 11 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಭೂಕುಸಿತ ಹಾಗೂ ಹಠಾತ್ ಪ್ರವಾಹದಿಂದಾಗಿ ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿದೆ. ಈ ಅವಘಡದಲ್ಲಿ ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾದವರ ಹುಡುಕಾಟ ಮತ್ತು ಸಿಲುಕಿರುವ ನಿವಾಸಿಗಳ ರಕ್ಷಣೆಗಾಗಿ ಬೃಹತ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಭೂಕುಸಿತ ಮತ್ತು ಮನೆಗಳು ಕುಸಿದು ಬಿದ್ದಿದೆ. ಪೂಂಚ್ನ ಸುರನ್ಕೋಟ್ ತಹಸಿಲ್ ಪ್ರದೇಶದಲ್ಲಿ ಅತಿಹೆಚ್ಚು ಹಾನಿ ಸಂಭವಿಸಿದ್ದು, ಸಂಕಷ್ಟಕ್ಕೆ ಸಿಲುಕಿರುವ ನಿವಾಸಿಗಳನ್ನು ರಕ್ಷಿಸಲು, ಹಾನಿಗೊಳಗಾದ ಪ್ರದೇಶಗಳನ್ನು ತೆರವುಗೊಳಿಸಲು ಹಾಗೂ ಸಂತ್ರಸ್ತರಿಗೆ ತುರ್ತು ನೆರವು ಒದಗಿಸಲು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿಯೇ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಜೌರಿ ಜಿಲ್ಲೆಯಲ್ಲೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ನೀರು ವಸತಿ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಪ್ರವಾಹದ ರಕ್ಷಣಾ ಗೋಡೆಗಳು ಕುಸಿದು ಬಿದ್ದಿದ್ದರಿಂದ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ.