ಭೋಪಾಲ್, ಜು. 19(DaijiworldNews/TA): ಮಧ್ಯಪ್ರದೇಶದಲ್ಲಿ ಉತ್ತಮ ಮಳೆಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ಭೋಪಾಲ್ನಲ್ಲಿ ಶನಿವಾರ ವಿಶಿಷ್ಟ ಆಚರಣೆ ನಡೆಸಲಾಯಿತು. ಮಳೆಯ ದೇವರು ಇಂದ್ರನನ್ನು ಪ್ರಸನ್ನಗೊಳಿಸುವ ನಂಬಿಕೆಯಿಂದ ಕತ್ತೆಗಳಿಗೆ ಗುಲಾಬ್ ಜಾಮೂನ್ ತಿನ್ನಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತು.

ಭೋಪಾಲ್ನ ಕೋಲಾರ ರಸ್ತೆಯಲ್ಲಿ ಬೆಳಿಗ್ಗೆ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯರು ಕತ್ತೆಗಳಿಗೆ ಸಿಹಿ ತಿನಿಸು ತಿನ್ನಿಸಿ, ರಾಜ್ಯದಾದ್ಯಂತ ಉತ್ತಮ ಮಳೆಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ಸಂಪ್ರದಾಯದಂತೆ ಈ ಆಚರಣೆ ಉತ್ತಮ ಮಳೆಯನ್ನು ಆಹ್ವಾನಿಸುವ ಸಂಕೇತವೆಂದು ಭಾಗವಹಿಸಿದವರು ತಿಳಿಸಿದ್ದಾರೆ. ಆಸಕ್ತಿದಾಯಕ ಸಂಗತಿಯೆಂದರೆ, ಈ ಬಾರಿ ಭೋಪಾಲ್ನಲ್ಲಿ ಮಾನ್ಸೂನ್ ಆರಂಭವಾದ ಬಳಿಕ 400.3 ಮಿಲಿಮೀಟರ್ ಮಳೆ ದಾಖಲಾಗಿದ್ದು, ಇದು ಈ ಅವಧಿಯ ಸಾಮಾನ್ಯ ಮಳೆಯ ಪ್ರಮಾಣಕ್ಕಿಂತ 44 ಶೇಕಡಾ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಆದರೆ ರಾಜ್ಯದ ಪರಿಸ್ಥಿತಿ ಎಲ್ಲೆಡೆ ಒಂದೇ ರೀತಿಯಲ್ಲಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶದ 35 ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ದಾಖಲಾಗಿದೆ. ಛಿಂದ್ವಾರಾ, ಜಬಲ್ಪುರ್, ಕಟ್ನಿ, ಸಾಗರ್, ಸತ್ನಾ, ಸಿಧಿ, ಸಿಂಗ್ರೌಲಿ, ದಾಮೋಹ್, ಮಂಡ್ಲಾ, ಪನ್ನಾ ಸೇರಿದಂತೆ ಹಲವು ಜಿಲ್ಲೆಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ. ಮಳೆಗಾಗಿ ಕತ್ತೆಗಳಿಗೆ ಗುಲಾಬ್ ಜಾಮೂನ್ ತಿನ್ನಿಸುವ ಈ ಅಪರೂಪದ ಆಚರಣೆಯ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರ ಗಮನ ಸೆಳೆದಿವೆ.