ನವದೆಹಲಿ, ಜು. 18 (DaijiworldNews/AK): ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ, ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಮಹಿಳೆಯೊಬ್ಬರು ನೀಲಿ ಇಂಕ್ ಎರಚಿದ ಘಟನೆ ನಡೆದಿದೆ.

ವಾಂಗ್ಚುಕ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರ ಬೆನ್ನಲ್ಲೇ ಜಂತರ್ ಮಂತರ್ನಲ್ಲಿ ಮತ್ತೊಂದು ಹೈಡ್ರಾಮಾ ನಡೆದಿದೆ.
ಶನಿವಾರ ಪ್ರತಿಭಟನಾ ಸ್ಥಳದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಏಕಾಏಕಿ ದೀಪ್ಕೆ ಅವರತ್ತ ನೀಲಿ ಇಂಕ್ ಎರಚಿದ್ದಾರೆ. ಇದರಿಂದ ಕೆಲಕಾಲ ಗದ್ದಲ ಉಂಟಾಗಿ, ಬೆಂಬಲಿಗರು ವೇದಿಕೆಯತ್ತ ಧಾವಿಸಿ ಮಹಿಳೆಯನ್ನು ತಡೆದಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಘಟನೆ ಬಳಿಕ ದೀಪ್ಕೆ ತಮ್ಮ X ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ʼನೀಲಿ ನನ್ನ ಬಣ್ಣ… ಜೈ ಭೀಮ್ʼ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಇಂಕ್ ಎರಚಿದ ಮಹಿಳೆ ಯಾರು, ಆಕೆಯ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.