ಅಹಮದಾಬಾದ್, ಜು. 18 (DaijiworldNews/AK): ಗುಜರಾತ್ನ ಅಹಮದಾಬಾದ್ ನಗರದ ವಸ್ತ್ರಲ್ ಪ್ರದೇಶದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ಇಲ್ಲಿನ ರಾಮೋಲ್-ಗತ್ರಾಡ್ ರಸ್ತೆಯ ಮೆಹಮೂದ್ಪುರ ಬಳಿ ಇರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ ಎಂಟು ಜನ ಕಾರ್ಮಿಕರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.

ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆಗೆ ದೈತ್ಯ ಬೆಂಕಿ ಹೊತ್ತಿಕೊಂಡಿದ್ದು, ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದುರಂತ ಸಂಭವಿಸಿದ ಕಾರ್ಖಾನೆಯ ಸಮೀಪದಲ್ಲೇ ಕ್ಷಿಪ್ರ ಕಾರ್ಯ ಪಡೆಯ ಸೇನಾ ಶಿಬಿರವಿತ್ತು. ಶನಿವಾರ ಮಧ್ಯಾಹ್ನ ಭಾರಿ ಸದ್ದಿನೊಂದಿಗೆ ಸ್ಫೋಟ ಕೇಳಿಸುತ್ತಿದ್ದಂತೆ ಎಚ್ಚೆತ್ತ ಆರ್ಎಎಫ್ ಸಿಬ್ಬಂದಿ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರುವ ಮುನ್ನವೇ ಜೀವದ ಹಂಗು ತೊರೆದು ಸುಡುತ್ತಿದ್ದ ಕಾರ್ಖಾನೆಯೊಳಗೆ ನುಗ್ಗಿದ್ದಾರೆ. ಬೆಂಕಿಯ ಜ್ವಾಲೆಯ ನಡುವೆ ಸಿಲುಕಿದ್ದ ಹಲವಾರು ಗಾಯಗೊಂಡ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ತಂದು ಆಸ್ಪತ್ರೆಗೆ ದಾಖಲಿಸುವ ಮೂಲಕ ದೊಡ್ಡ ಮಟ್ಟದ ಪ್ರಾಣಹಾನಿಯನ್ನು ತಪ್ಪಿಸಿದ್ದಾರೆ.
ನಂತರ ಸ್ಥಳಕ್ಕೆ ಧಾವಿಸಿದ 5 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಾಗೂ ಆಂಬ್ಯುಲೆನ್ಸ್ಗಳು ಭಾರಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಅಹಮದಾಬಾದ್ ಮೇಯರ್ ಹಿತೇಶ್ ಬರೋಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದಾರೆ.
ದುರಂತ ಸಂಭವಿಸಿದ ಈ ಪಟಾಕಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಕಾನೂನುಬಾಹಿರವಾಗಿ ಮತ್ತು ಅಕ್ರಮವಾಗಿ ನಡೆಸಲಾಗುತ್ತಿತ್ತು.