ಬೆಂಗಳೂರು, ,ಜು. 18 (DaijiworldNews/AK):ಉಸಿರಾಟದ ತೊಂದರೆ ಅಂತಾ ನಾಲ್ಕು ದಿನಗಳ ಹಿಂದೆ ಆಸ್ಪತ್ರೆ ಸೇರಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ (ಪತ್ನಿ ಚೆನ್ನಮ್ಮ ಶನಿವಾರ ವಿಧಿವಶರಾಗಿದ್ದಾರೆ. ಬದುಕಿನುದ್ದಕ್ಕೂ ಹಲವು ಸಂಕಷ್ಟ ಎದುರಿಸಿ ಗೆದ್ದಿದ್ದ ಚೆನ್ನಮ್ಮ ಈ ಬಾರಿ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ರಾಜಕೀಯ ನಾಯಕರು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ಶ್ರೀ ದೇವೇಗೌಡ ಪತ್ನಿ ಚೆನ್ನಮ್ಮ ನಿಧನದ ಸುದ್ದಿ ತೀವ್ರ ಆಘಾತ ಮತ್ತು ನೋವುಂಟು ಮಾಡಿದೆ. ಸಮಾಜ ಸೇವೆಯ ಮೇಲಿದ್ದ ಅವರ ಅಪಾರ ಕಾಳಜಿ ಹಾಗೂ ಅವರ ವಿನಮ್ರ ಸ್ವಭಾವ ಎಲ್ಲರ ಗೌರವಕ್ಕೆ ಪಾತ್ರವಾಗಿತ್ತು. ಈ ದುಃಖದ ಸಮಯದಲ್ಲಿ, ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ನಿಧನದಿಂದ ದುಃಖಿತನಾಗಿದ್ದೇನೆ. ಜನತಾ ಪರಿವಾರದಲ್ಲಿದ್ದ ನಾನು ದೇವೇಗೌಡರ ಕುಟುಂಬದೊಂದಿಗೆ ನಿಕಟವಾದ ಒಡನಾಟ ಇಟ್ಟುಕೊಂಡವನಾಗಿ ಚೆನ್ನಮ್ಮನವರನ್ನು ಸಮೀಪದಿಂದ ಬಲ್ಲವನು. ಚೆನ್ನಮ್ಮನವರು ತಮ್ಮ ಜೀವನದಲ್ಲಿ ಎದುರಾದ ಕಷ್ಟ ನೋವುಗಳಿಂದ ಕುಗ್ಗದೆ, ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ ಗಟ್ಟಿಗಿತ್ತಿ. ದೇವೇಗೌಡರ ರಾಜಕೀಯ ಜೀವನದ ಏಳುಬೀಳಿನ ನಡುವೆ ದೊಡ್ಡ ಕುಟುಂಬವನ್ನು ಪೊರೆಯುತ್ತಾ ಬಂದ ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದರು.
ಮಾಜಿ ಪ್ರಧಾನಿಗಳ ಮಡದಿಯಾಗಿದ್ದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಎಲ್ಲರನ್ನೂ ಅಕ್ಕರೆಯಿಂದ ಕಾಣುತ್ತಿದ್ದ ಚೆನ್ನಮ್ಮನವರು, ಮಾದರಿ ಸತಿಯಾಗಿ ತುಂಬು ಜೀವನ ಸಾಗಿಸಿದವರು. ದೀರ್ಘಕಾಲದ ಸಂಗಾತಿಯನ್ನು ಈ ಇಳಿವಯಸ್ಸಿನಲ್ಲಿ ಕಳೆದುಕೊಂಡ ದೇವೇಗೌಡರಿಗೆ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಗೌಡರ ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಅಪಾರ ಧೈವಭಕ್ತೆಯಾಗಿದ್ದ ಚನ್ನಮ್ಮನವರು ತುಂಬು ಕುಟುಂಬವನ್ನ ಸಾಕಿ ಸಲಹಿದ ಮಹಾನ್ ತಾಯಿ. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಅವರ ಕುಟುಂಬ ಸದಸ್ಯರ ರಾಜಕೀಯ ಮತ್ತು ಬದುಕಿನ ಏಳ್ಗೆಯ ಹಿಂದೆ ಚನ್ನಮ್ಮನವರ ಪರಿಶ್ರಮ ಅಡಗಿದೆ . ಇಳಿ ವಯಸ್ಸಿನಲ್ಲಿ ಪತ್ನಿಯ ಅಗಲಿಕೆ ದೇವೇಗೌಡರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ನೋವು ತರುವುದರ ಜತೆಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಅವರ ಕುಟುಂಬವರ್ಗ, ಬಂಧುಗಳು ಹಾಗೂ ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಡಿ.ಕೆ ಶಿವಕುಮಾರ್ಅವರು ತಿಳಿಸಿದ್ದಾರೆ
‘‘ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಸರಳತೆ ಹಾಗೂ ತಾಳ್ಮೆಯ ಸಾಕಾರಮೂರ್ತಿಯಾಗಿದ್ದ ಅವರು, ಶ್ರೀ ದೇವೇಗೌಡರ ಸುದೀರ್ಘ ಸಾರ್ವಜನಿಕ ಜೀವನಕ್ಕೆ ಭದ್ರ ಬುನಾದಿಯಾಗಿ, ಇಡೀ ಕುಟುಂಬವನ್ನು ಮಮತೆಯಿಂದ ಮುನ್ನಡೆಸಿದ ಆದರ್ಶ ಮಾತೃಶಕ್ತಿಯಾಗಿದ್ದರು. ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಾಪ ಸೂಚಿಸಿದ್ದಾರೆ.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಎಂಎಲ್ಸಿ ಸಿ.ಟಿ.ರವಿ ಸಂತಾಪ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.