ಬೆಂಗಳೂರು, ಜು. 18 (DaijiworldNews/TA): ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ (85) ಶನಿವಾರ ನಿಧನ ಹೊಂದಿದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಜುಲೈ 15ರಂದು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಚನ್ನಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡದ ನಿಗಾದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದ್ದರೂ, ಚಿಕಿತ್ಸೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದರು.
ಹಾಸನ ಜಿಲ್ಲೆಯ ಮುತ್ತಿಗೆ ಹಿರೇಹಳ್ಳಿಯವರಾದ ಚನ್ನಮ್ಮ ಅವರು 1954ರ ಮೇ 25ರಂದು ಎಚ್.ಡಿ. ದೇವೇಗೌಡ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದರು. ಈ ದಂಪತಿಗೆ ಎಚ್.ಡಿ. ರೇವಣ್ಣ, ಎಚ್.ಡಿ. ಬಾಲಕೃಷ್ಣ, ಎಚ್.ಡಿ. ರಮೇಶ್ ಗೌಡ, ಎಚ್.ಡಿ. ಕುಮಾರಸ್ವಾಮಿ, ಶೈಲಜಾ ಹಾಗೂ ಅನಸೂಯಾ ಸೇರಿ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ.
ದೇವೇಗೌಡರ ರಾಜಕೀಯ ಜೀವನದ ಉದ್ದಕ್ಕೂ ಚನ್ನಮ್ಮ ಅವರು ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಅವರ ಯಶಸ್ಸಿನ ಹಿಂದೆ ಸದಾ ಬಲವಾಗಿ ನಿಂತಿದ್ದರು. ಆರು ಮಕ್ಕಳನ್ನು ಸಾಕಿ-ಬೆಳೆಸುವುದರ ಜೊತೆಗೆ ಅವರ ಶಿಕ್ಷಣದ ಜವಾಬ್ದಾರಿಯನ್ನೂ ಹೊತ್ತು ಆದರ್ಶ ಗೃಹಿಣಿಯಾಗಿ ಗುರುತಿಸಿಕೊಂಡಿದ್ದರು.
2001ರಲ್ಲಿ ನಡೆದಿತ್ತು ಆ್ಯಸಿಡ್ ದಾಳಿ: 2001ರ ಫೆಬ್ರವರಿಯಲ್ಲಿ ಹಾಸನ ಜಿಲ್ಲೆಯ ಹರದನಹಳ್ಳಿಯ ದೇವಾಲಯದಲ್ಲಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಚನ್ನಮ್ಮ ಅವರ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.
ಚನ್ನಮ್ಮ ಅವರು ದೇವೇಗೌಡ ಕುಟುಂಬದಷ್ಟೇ ಅಲ್ಲ, ರಾಜ್ಯ ರಾಜಕೀಯ ವಲಯದಲ್ಲಿಯೂ ಸರಳತೆ, ತಾಳ್ಮೆ ಮತ್ತು ಕುಟುಂಬದ ಮೇಲಿನ ಕಾಳಜಿಗೆ ಹೆಸರುವಾಸಿಯಾಗಿದ್ದರು. ಅವರ ನಿಧನಕ್ಕೆ ರಾಜಕೀಯ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.