ಬೆಂಗಳೂರು,ಜು. 18 (DaijiworldNews/ AK): ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲು ಬಿಡದಿಯಿಂದ ಬೆಂಗಳೂರುವರೆಗೆ ಬೃಹತ್ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ.

ಎನ್ಡಿಎ ಮಿತ್ರ ಪಕ್ಷವಾಗಿರುವ ಜೆಡಿಎಸ್ ಜುಲೈ 30, 31 ಹಾಗೂ ಆಗಸ್ಟ್ 1 ರಂದು ಪಾದಯಾತ್ರೆ ಎಂಬುದಾಗಿ ದಿನಾಂಕ ಘೋಷಣೆ ಮಾಡಿದೆ. ಈ ದಿನಾಂಕದ ಬಗ್ಗೆ ಬಿಜೆಪಿಗೆ ಯಾವುದೇ ತರಕಾರು ಇಲ್ಲ ಎಂದು ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ದಿನಾಂಕದ ಬಗ್ಗೆ ಸುದ್ದಿವಾಹಿನಿಗಳಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಬೇರೆ ಬೇರೆ ಪಾದಯಾತ್ರೆ ಮಾಡುತ್ತವೆಯೇ ಇಲ್ಲವೇ ಒಟ್ಟಿಗೆ ಮಾಡುತ್ತಾರೋ ಎಂದು ಚರ್ಚೆ ಆಗುತ್ತಿದೆ. ನಾವು ಎನ್ಡಿಎ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಬೇಡಿಕೆ ಒಂದೇ ಇದೆ. ದಿನಾಂಕದ ಬಗ್ಗೆ ಬಿಜೆಪಿಗೆ ಯಾವುದೇ ಅಪಸ್ವರ ಇಲ್ಲ ಎಂದರು.
ಎರಡೂ ಪಕ್ಷಗಳ ಆಗ್ರಹ ಬಿಡದಿ ಟೌನ್ ಶಿಪ್ ಅನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂಬುದೇ ಆಗಿದೆ. ಪಾದಯಾತ್ರೆ ದಿನಾಂಕದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಒಮ್ಮೆ ಜೆಡಿಎಸ್ ಮುಖಂಡರ ಜೊತೆ ಮಾತನಾಡಲಿದ್ದಾರೆ. ದಿನಾಂಕದ ಬಗ್ಗೆ ಯಾವುದೇ ವಿವಾದ ಮಾಡುವುದಿಲ್ಲ. ಪಾದಯಾತ್ರೆ ಬಗ್ಗೆ ಎರಡೂ ಪಕ್ಷಗಳು ಒಮ್ಮತದ ನಿರ್ಧಾರ ಪ್ರಕಟಿಸಲಿವೆ ಎಂದು ಹೇಳಿದರು. ಕೂಡಲೇ ಬಿಡದಿ ಟೌನ್ ಶಿಫ್ ಅನ್ನು ಕೈ ಬಿಡಬೇಕು ಎಂದು ನಾವು ಆಗ್ರಹಿಸಿದ್ದೇವೆ. ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ಸಾವಿರಾರು ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
ದ್ವಿಮುಖ ನೀತಿ ಸರಿಯಲ್ಲ
ಬಿಡದಿ ಟೌನ್ಶಿಪ್ಗೆ ರೈತರ ಜಮೀನನ್ನು ಒತ್ತಾಯವಾಗಿ ಪಡೆಯುವುದಿಲ್ಲ ಎಂದು ಹೇಳುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಭೂಸ್ವಾಧೀನಕ್ಕೆ ಎರಡನೇ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಒತ್ತಾಯವಾಗಿ ಭೂಮಿ ಪಡೆಯುವುದಿಲ್ಲ ಎಂದ ಮೇಲೆ ಯಾಕೆ ಅಧಿಸೂಚನೆ ಹೊರಡಿಸಬೇಕು. ಇಂತಹ ದ್ವಿಮುಖ ನೀತಿಯನ್ನು ಶಿವಕುಮಾರ್ ಅವರು ಬಿಡಬೇಕು ಎಂದು ಆಗ್ರಹಿಸಿದರು.