ಶ್ರೀಹರಿಕೋಟಾ, ಜು. 18 (DaijiworldNews/TA): ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದ್ದು, ಹೈದರಾಬಾದ್ ಮೂಲದ ಸ್ಪೇಸ್ ಸ್ಟಾರ್ಟಪ್ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ದೇಶದ ಮೊದಲ ಖಾಸಗಿ ಆರ್ಬಿಟಲ್ ಲಾಂಚ್ ವೆಹಿಕಲ್ 'ವಿಕ್ರಮ್-1' ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಯಿತು.

'ಮಿಷನ್ ಆಗಮನ್' ಹೆಸರಿನ ಈ ಉಡಾವಣೆಯು ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಮಹತ್ವದ ಮೈಲಿಗಲ್ಲಾಗಿದ್ದು, ದೇಶದ ವಾಣಿಜ್ಯ ಬಾಹ್ಯಾಕಾಶ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಹೆಜ್ಜೆಯಾಗಿದೆ. ರಾಕೆಟ್ ಅನ್ನು ಇಂದು ಬೆಳಗ್ಗೆ 11:30ಕ್ಕೆ ಉಡಾವಣೆ ಮಾಡಲು ನಿಗದಿಪಡಿಸಲಾಗಿತ್ತು. ಆದರೆ ಕೌಂಟ್ಡೌನ್ ಅಂತಿಮ ಹಂತದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಪತ್ತೆಯಾದ ಕಾರಣ ಉಡಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಬಳಿಕ ಸಮಸ್ಯೆಗಳನ್ನು ಪರಿಹರಿಸಿದ ನಂತರ 12:05ಕ್ಕೆ ರಾಕೆಟ್ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು.
ವಿಕ್ರಮ್-1 ಸಂಪೂರ್ಣವಾಗಿ ಭಾರತದ ಖಾಸಗಿ ಕಂಪನಿಯೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಮೊದಲ ಆರ್ಬಿಟಲ್ ಲಾಂಚ್ ವೆಹಿಕಲ್ ಆಗಿದೆ. ಈ ಉಡಾವಣೆ ಭಾರತದ ಖಾಸಗಿ ಕಂಪನಿಗಳ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವುದರ ಜೊತೆಗೆ, ವಾಣಿಜ್ಯ ಉಪಗ್ರಹ ಉಡಾವಣಾ ಕ್ಷೇತ್ರದಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.
ವಿಕ್ರಮ್-1ರ ಯಶಸ್ವಿ ಪರೀಕ್ಷಾ ಉಡಾವಣೆಯೊಂದಿಗೆ, ಜಾಗತಿಕ ಖಾಸಗಿ ಆರ್ಬಿಟಲ್ ಲಾಂಚ್ ಸೇವೆಗಳ ಮಾರುಕಟ್ಟೆಯಲ್ಲಿ ಭಾರತ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತೀಯ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಿಗೆ ಇದು ಹೊಸ ಅವಕಾಶಗಳ ಬಾಗಿಲು ತೆರೆಯುವ ಬೆಳವಣಿಗೆಯಾಗಿ ಪರಿಣಮಿಸಿದೆ.