ನವದೆಹಲಿ, ಜು. 18 (DaijiworldNews/AA): ಕಳೆದ 20 ದಿನಗಳಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆ ಅವರನ್ನು ದೆಹಲಿ ಪೊಲೀಸರು ಶನಿವಾರ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ವಾಂಗ್ಚುಕ್ ಅವರು ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಬಿಗಿ ಭದ್ರತೆಯ ನಡುವೆ ಅವರನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ಯಲಾಗಿದೆ. ಸದ್ಯ ಅವರು ಪ್ರಜ್ಞೆಯಲ್ಲಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿವೆ.
ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿರುವುದರಿಂದ ಹೈಕೋರ್ಟ್ ಆದೇಶಗಳಿಗೆ ಅನುಸಾರವಾಗಿ ಮತ್ತು ತಜ್ಞರ ವೈದ್ಯಕೀಯ ಸಲಹೆಯ ಮೇರೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಅವರನ್ನು ಅಗತ್ಯ ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರತಿಭಟನಾಕಾರರು ಜಂತರ್ ಮಂತರ್ ಅನ್ನು ಶಾಂತಿಯುತವಾಗಿ ತೆರವುಗೊಳಿಸುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.
ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೆಲ ಪ್ರತಿಭಟನಾಕಾರರು ಪೊಲೀಸರ ಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಆದರೆ, ಸಂಪೂರ್ಣ ಸಂಯಮದಿಂದ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.