ಚಾಮರಾಜನಗರ, ಜು. 18 (DaijiworldNews/TA): ದೇಗುಲವಿಲ್ಲ, ಪೂಜಾರಿಯ ಪೂಜೆಯೂ ಇಲ್ಲ, ಆಡಂಬರವಿಲ್ಲ, ಉತ್ಸವವಂತೂ ಮೊದಲೇ ಇಲ್ಲ. ಆದರೂ ಭಕ್ತರ ಭಕ್ತಿಗೇನು ಕಮ್ಮಿ ಇಲ್ಲ. ನಿಜವಾದ ಭಕ್ತಿಗೆ ಪೂಜೆ ಪುನಸ್ಕಾರಗಳ ಅಗತ್ಯ ಇಲ್ಲ ಅನ್ನೋ ಹಾಗೆ ಭಕ್ತರ ನಂಬಿಕೆಗೆ ಇಂಬುಗೆ ನೀಡುವ ದೇವಿ ನೆಲೆ ನಿಂತಿರೋದು ರಸ್ತೆ ಮಧ್ಯದಲ್ಲಿ. ಇಲ್ಲಿ ಸವಾರರ ಪ್ರಾರ್ಥನೆಯೇ ದೇವಿ ಅಮ್ಮನಿಗೆ ನೈವೇದ್ಯ. ಅಂತಹ ಒಂದು ವಿಶಿಷ್ಟ ಆರಾಧನಾ ತಾಣವಿದು.

ನಿಜ ರಸ್ತೆಯ ಮಧ್ಯಭಾಗದಲ್ಲಿರುವ ಒಂದು ಪುಟ್ಟ ಕುಳಿಯ ಮುಂದೆ ವಾಹನಗಳನ್ನು ನಿಧಾನಗೊಳಿಸಿ ಕೈಮುಗಿದು ನಮಸ್ಕರಿಸುವ ದೃಶ್ಯ ಕಂಡರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಆದರೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಗರ ಗ್ರಾಮದಲ್ಲಿರುವ ಈ ಸ್ಥಳವು ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಭಕ್ತಿಯ ತಾಣವಾಗಿದೆ. ಸ್ಥಳೀಯವಾಗಿ ನರಿ ಕಲ್ಲು ಮಾರಮ್ಮ ಕುಳಿ' ಎಂದು ಕರೆಯಲಾಗುವ ಈ ಪುಟ್ಟ ಕುಳಿ ಇಂದು ಸಾವಿರಾರು ಭಕ್ತರ ನಂಬಿಕೆಯ ಕೇಂದ್ರವಾಗಿದೆ.
ದೇವಾಲಯವಿಲ್ಲ - ಆದರೂ ಅಪಾರ ಭಕ್ತಿ : ಈ ತಾಣದಲ್ಲಿ ಭವ್ಯ ದೇವಾಲಯವಿಲ್ಲ, ಗೋಪುರವೂ ಇಲ್ಲ. ಆದರೂ ಪ್ರತಿನಿತ್ಯ ಭಕ್ತರು ಇಲ್ಲಿಗೆ ಆಗಮಿಸಿ ಮಾರಮ್ಮ ದೇವಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಾರೆ. ಗ್ರಾಮೀಣ ಸಂಸ್ಕೃತಿ ಮತ್ತು ಜನಪದ ನಂಬಿಕೆಯ ಪ್ರತೀಕವಾಗಿ ಈ ಸ್ಥಳ ಗುರುತಿಸಿಕೊಂಡಿದೆ.
ಈ ಜಾಗದಲ್ಲಿ ಹಿಂದೆ ಉದ್ಭವ ಕಲ್ಲು ಇತ್ತು. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಈ ಪವಿತ್ರ ಸ್ಥಳವನ್ನು ತೆರವುಗೊಳಿಸಬಾರದು ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಗ್ರಾಮಸ್ಥರ ಭಾವನೆಗೆ ಸ್ಪಂದಿಸಿದ ಅಧಿಕಾರಿಗಳು ಕಲ್ಲು ಇದ್ದ ಸ್ಥಳವನ್ನು ಹಾಗೆಯೇ ಉಳಿಸಿಕೊಂಡು ಅದರ ಸುತ್ತ ರಸ್ತೆ ನಿರ್ಮಿಸಿದರು. ರಸ್ತೆಯನ್ನು ಎತ್ತರದಲ್ಲಿ ನಿರ್ಮಿಸಿದ್ದರಿಂದ ಕಲ್ಲು ಕೆಳಭಾಗದಲ್ಲೇ ಉಳಿದು, ಕಾಲಕ್ರಮೇಣ ಅದು ಪುಟ್ಟ ಕುಳಿಯಂತೆ ಕಾಣಲು ಆರಂಭವಾಯಿತು. ಇದೇ ಕಾರಣದಿಂದ ಈ ಸ್ಥಳಕ್ಕೆ 'ನರಿ ಕಲ್ಲು ಮಾರಮ್ಮ ಕುಳಿ' ಎಂಬ ಹೆಸರು ಬಂದಿದೆ.
ಪೂಜಾರಿಯಿಲ್ಲದ ಅಪರೂಪದ ಆರಾಧನಾ ತಾಣ : ಈ ಸ್ಥಳದ ಮತ್ತೊಂದು ವಿಶೇಷವೆಂದರೆ, ಇಲ್ಲಿ ಯಾವುದೇ ಪೂಜಾರಿ ಇರುವುದಿಲ್ಲ. ಭಕ್ತರೇ ತಮ್ಮ ಕೈಯಿಂದ ಅರಿಶಿನ, ಕುಂಕುಮ, ಹೂವು ಹಾಗೂ ತೆಂಗಿನಕಾಯಿ ಸಮರ್ಪಿಸಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಹರಕೆ ಸಲ್ಲಿಸುವ ಸಂಪ್ರದಾಯ ಹಲವು ತಲೆಮಾರುಗಳಿಂದ ಮುಂದುವರಿದಿದೆ.
ಇಂದಿಗೂ ಈ ರಸ್ತೆಯಲ್ಲಿ ಸಂಚರಿಸುವ ಅನೇಕ ವಾಹನ ಚಾಲಕರು ಈ ಸ್ಥಳದ ಬಳಿ ಬಂದಾಗ ವಾಹನದ ವೇಗವನ್ನು ಕಡಿಮೆ ಮಾಡುತ್ತಾರೆ. ಹಲವರು ವಾಹನದಿಂದ ಇಳಿಯದೆ ಕೈಮುಗಿದು ನಮಸ್ಕರಿಸಿ ತಮ್ಮ ಪ್ರಯಾಣ ಮುಂದುವರಿಸುತ್ತಾರೆ. ರಸ್ತೆಯ ಮಧ್ಯದಲ್ಲಿರುವ ಈ ಪುಟ್ಟ ಕುಳಿ ಕೇವಲ ಒಂದು ಗುಂಡಿಯಲ್ಲ, ಗ್ರಾಮೀಣ ನಂಬಿಕೆ, ಭಕ್ತಿ ಮತ್ತು ಸಂಸ್ಕೃತಿಯ ಜೀವಂತ ಸಂಕೇತವಾಗಿದೆ. ಯಾವುದೇ ಆಡಂಬರವಿಲ್ಲದ ಈ ಪವಿತ್ರ ತಾಣ, "ಭಕ್ತಿ ಇದ್ದರೆ ದೇವಾಲಯದ ಗಾತ್ರ ಮುಖ್ಯವಲ್ಲ" ಎಂಬ ಸಂದೇಶವನ್ನು ಇಂದಿಗೂ ಸಾರುತ್ತಿದೆ.