ಗಾಂಧಿನಗರ, ಜು. 17 (DaijiworldNews/AA): ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಐವರು ಶಂಕಿತ ಉಗ್ರರನ್ನು ಗುಜರಾತ್ನ ವಿವಿಧ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ.

ಬಂಧಿತರನ್ನು ಬಿಲಾಲ್ ಅಬಿದ್ ಶೇರಾ, ಮೊಹಮ್ಮದ್ ಆಯೂಬ್ ಖಾಡಿವಾಲ್, ಮೊಹಮ್ಮದ್ ಶಾಪಿ ಮುಖಿ, ಮೊಹಮ್ಮದ್ ಹಸನ್ ಕರಾಡಿಯಾ ಮತ್ತು ಮೊಹಮ್ಮದ್ ಆಯೂಬ್ ಸುನಾಸರಾ ಎಂದು ಗುರುತಿಸಲಾಗಿದೆ.
ಗುಜರಾತ್ ಉಗ್ರನಿಗ್ರಹ ದಳ ಈ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ವೇಳೆ ಬಂಧಿರ ಪೈಕಿ ಓರ್ವ ಟೈಮ್ ಬಾಂಬ್ ತಯಾರಿಸುವ ಸಿದ್ಧತೆಯಲ್ಲಿ ತೊಡಗಿದ್ದ ಎಂಬುದು ಬೆಳಕಿಗೆ ಬಂಧಿದೆ. ಬಂಧಿತರೆಲ್ಲರೂ ಪಾಕ್ ಮೂಲದ ಜೈಶ್ ಸಂಘಟನೆಯ ಸದಸ್ಯರಾಗಿದ್ದು, ಸ್ಫೋಟಕ ಸಾಧನಗಳನ್ನು ಪರೀಕ್ಷಿಸುವ ಕೃತ್ಯದಲ್ಲಿ ತೊಡಗಿದ್ದರು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಸಂಪರ್ಕಿಸಿ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತಿದ್ದರು. ಈ ಐವರು ಶಂಕಿತರನ್ನು ಈ ಹಿಂದೆ ಬಂಧಿಸಲಾಗಿದ್ದ ಉಗ್ರ ಘಟಕದ ಸದಸ್ಯರ ವಿಚಾರಣೆ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಪತ್ತೆಹಚ್ಚಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಕೇಂದ್ರ ಹಾಗೂ ರಾಜ್ಯ ಗುಪ್ತಚರ ಸಂಸ್ಥೆಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ.