ಬೆಂಗಳೂರು,ಜು. 17 (DaijiworldNews/AK): ಜಿಬಿಎ ಚುನಾವಣೆ ಮುಂದೂಡುವಿಕೆಯಲ್ಲಿ ರಾಜ್ಯ ಸರಕಾರದ ಷಡ್ಯಂತ್ರ ಮತ್ತು ಕುತಂತ್ರ ಇದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಇದೇ ಮುಖ್ಯಮಂತ್ರಿಗಳು ಬೆಂಗಳೂರಿನ ಉಸ್ತುವಾರಿ ಸಚಿವರಾಗಿದ್ದರು. ಈ ಸರಕಾರದ ಯೋಗ್ಯತೆಗೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ; ಗುಂಡಿ ಮುಚ್ಚಲೂ ಸಾಧ್ಯ ಆಗಿಲ್ಲ ಎಂದು ಟೀಕಿಸಿದರು.
ಇಂಥ ವಾತಾವರಣದಲ್ಲಿ ಜಿಬಿಎ ಚುನಾವಣೆ ನಡೆಸಿದರೆ ಐದೂ ಕಡೆ ಬಿಜೆಪಿ ಅಧಿಕಾರಕ್ಕೆ ಬರುವ ಭಯದಿಂದ ಸುಪ್ರೀಂ ಕೋರ್ಟಿನಲ್ಲಿ ಚುನಾವಣಾ ಆಯೋಗದ ಮೂಲಕ ಅರ್ಜಿ ಸಲ್ಲಿಸಿ ಕಪಟ ನಾಟಕವನ್ನು ಕಾಂಗ್ರೆಸ್ ಸರಕಾರ ನಡೆಸುತ್ತಿದೆ ಎಂದು ಆಕ್ಷೇಪಿಸಿದರು.
ಸುಪ್ರೀಂ ಕೋರ್ಟ್ ಕೂಡ ಡಿಸೆಂಬರ್ ವರೆಗೂ ಕಾಲಾವಕಾಶ ಕೊಟ್ಟಿದೆ. ಇದರ ಹಿಂದೆ ರಾಜ್ಯ ಸರಕಾರದ ಷಡ್ಯಂತ್ರ ಮತ್ತು ಕುತಂತ್ರ ಇರುವಂಥದ್ದು ಎಂದು ತಿಳಿಸಿದರು. ಕಾಂಗ್ರೆಸ್ಸಿನವರಿಗೆ ಚುನಾವಣೆ ನಡೆಸುವ ಮತ್ತು ಬೆಂಗಳೂರು ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇಲ್ಲ ಎಂದು ನುಡಿದರು.