ನವದೆಹಲಿ, ಜು. 15 (DaijiworldNews/AA): ಅಹಮದಾಬಾದಿನಲ್ಲಿ 2025ರ ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ, ವಿಮಾನದ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಆಡಿಯೋ ಸೇರಿದಂತೆ ಯಾವುದೇ ನಿರ್ಣಾಯಕ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ(ಎಎಐಬಿ) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

ಅಪಘಾತದಲ್ಲಿ ಮೃತಪಟ್ಟ ಪೈಲಟ್ನ ತಂದೆ ಪುಷ್ಕರ್ ರಾಜ್ ಸಭರ್ವಾಲ್ ಅವರು ತನಿಖೆಯ ವಿವರಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಎಎಐಬಿ ಸುಪ್ರೀಂನಲ್ಲಿ ಅಫಿಡವಿಟ್ ಸಲ್ಲಿಸಿದೆ. "ಇಂತಹ ಸೂಕ್ಷ್ಮ ಮಾಹಿತಿಯನ್ನು ಬಿಡುಗಡೆ ಮಾಡುವುದನ್ನು ಭಾರತೀಯ ಹಾಗೂ ಅಂತಾರಾಷ್ಟ್ರೀಯ ವಾಯುಯಾನ ಕಾನೂನುಗಳು ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ. ವಿಮಾನ ಅಪಘಾತದ ಸಮಯದಲ್ಲಿ ಪೈಲಟ್ಗಳು ಆಡುವ ಕೊನೆಯ ಮಾತುಗಳು, ವಿಮಾನದ ಒಳಗಿನ ದೃಶ್ಯಾವಳಿಗಳು, ಸಿಬ್ಬಂದಿ ಸದಸ್ಯರ ಹೇಳಿಕೆಗಳು ಮತ್ತು ಬಲಿಪಶುಗಳ ವೈಯಕ್ತಿಕ ಮಾಹಿತಿಯನ್ನು ಜಗತ್ತಿನೆದುರು ಇಡುವುದು ಕಾನೂನುಬಾಹಿರ" ಎಂದು ಸ್ಪಷ್ಟನೆ ನೀಡಿದೆ.
ಯಾವುದೇ ಬಾಹ್ಯ ಒತ್ತಡಗಳಿಲ್ಲದೆ, ಅತ್ಯಂತ ಪಾರದರ್ಶಕ ಹಾಗೂ ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಈ ಕಾನೂನು ನಿರ್ಬಂಧಗಳು ಜಾರಿಯಲ್ಲಿವೆ. ವಿಮಾನ ಅಪಘಾತಗಳ ತನಿಖೆಯು ಕೇವಲ ಒಂದು ದೇಶದ ಪೊಲೀಸ್ ತನಿಖೆಯಂತಲ್ಲ. ಇದು ಜಾಗತಿಕ ವಾಯುಯಾನ ಸಂಸ್ಥೆಯ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಒಳಪಟ್ಟಿರುತ್ತದೆ ಎಂದಿದೆ.
"ಜಾಗತಿಕ ನಿಯಮಗಳು ಏನು ಹೇಳುತ್ತವೆ? ವಿಮಾನ ಅಪಘಾತಗಳ ತನಿಖೆಗೆ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಅನುಬಂಧ 13ರ ಪ್ರಕಾರ ಪ್ರಮಾಣಿತ ಕಾರ್ಯವಿಧಾನಗಳನ್ನು ನಿಗದಿಪಡಿಸಲಾಗಿದೆ. ಭಾರತದಲ್ಲಿ ಇದರ ಅನ್ವಯ ವಿಮಾನ ನಿಯಮಗಳು, 2025 ರ ಪ್ರಕಾರ ತನಿಖೆ ನಡೆಯುತ್ತದೆ" ಎಂದು ಹೇಳಿದೆ.
"ಘಟನೆ ನಡೆದ ದೇಶವು ತನಿಖೆಯ ಜವಾಬ್ದಾರಿ ಹೊರಬೇಕಾಗುತ್ತದೆ. ಇದರಲ್ಲಿ ವಿಮಾನ ನೋಂದಣಿಯಾದ ದೇಶ, ವಿಮಾನಯಾನ ಸಂಸ್ಥೆಯ ದೇಶ, ವಿಮಾನವನ್ನು ವಿನ್ಯಾಸಗೊಳಿಸಿದ ಮತ್ತು ಅದನ್ನು ತಯಾರಿಸಿದ ದೇಶಗಳು ಭಾಗವಹಿಸುತ್ತವೆ. ಈ ಎಲ್ಲಾ ದೇಶಗಳ ತಾಂತ್ರಿಕ ಪ್ರತಿನಿಧಿಗಳು ಒಟ್ಟಾಗಿ ತನಿಖೆ ನಡೆಸುವುದರಿಂದ, ಬ್ಲ್ಯಾಕ್ ಬಾಕ್ಸ್ನ ರಹಸ್ಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ" ಎಂದು ಸಂಸ್ಥೆ ವಾದಿಸಿದೆ.