ಬೆಂಗಳೂರು, ಜು. 15 (DaijiworldNews/AA): ಶಾಲೆಯಲ್ಲಿ ಶಿಕ್ಷಕರು ನೀಡಿದ ಅತಿಯಾದ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ತಾಳಲಾರದೆ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಬಿಲ್ಡಿಂಗ್ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಆತಂಕಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನಪಾಳ್ಯ ನಿವಾಸಿ 13 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಶಿಕ್ಷಕರ ಈ ಕ್ರೂರ ವರ್ತನೆ ಮತ್ತು ಶಾಲಾ ಮಂಡಳಿಯ ನಿರಂತರ ಟಾರ್ಚರ್ನಿಂದಾಗಿ ವಿದ್ಯಾರ್ಥಿ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ಆರೋಪಿಸಲಾಗಿದೆ.
ಮನನೊಂದ ವಿದ್ಯಾರ್ಥಿ ತನ್ನ ಮನೆಯ ಬಿಲ್ಡಿಂಗ್ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ಬಿಲ್ಡಿಂಗ್ನಿಂದ ಬಿದ್ದ ರಭಸಕ್ಕೆ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡು ಅಸ್ವಸ್ಥನಾಗಿದ್ದನು. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಗನಿಗೆ ಆಗಿರುವ ಸ್ಥಿತಿಯನ್ನು ಕಂಡು ಪೋಷಕರು ಹಾಗೂ ಸಂಬಂಧಿಕರು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ಆತ್ಮಹತ್ಯೆ ಯತ್ನದ ಕುರಿತು ಸಮಗ್ರ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸಿದ್ದಾರೆ.