ನವದೆಹಲಿ, ಜು. 15 (DaijiworldNews/AK): ಒಬ್ಬ ವ್ಯಕ್ತಿಯ ದೃಢಸಂಕಲ್ಪ ಎಷ್ಟರ ಮಟ್ಟಿಗೆ ಜೀವನವನ್ನು ಬದಲಾಯಿಸಬಲ್ಲದು ಎಂಬುದಕ್ಕೆ ಐಎಎಸ್ ಅಧಿಕಾರಿ ಸಮ್ಯಕ್ ಜೈನ್ ಅವರ ಬದುಕು ಅತ್ಯುತ್ತಮ ಉದಾಹರಣೆ. 20ನೇ ವಯಸ್ಸಿನಲ್ಲೇ ಸಂಪೂರ್ಣ ದೃಷ್ಟಿ ಕಳೆದುಕೊಂಡರೂ, ತಮ್ಮ ಕನಸನ್ನು ಕೈಬಿಡದೆ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ 7ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿದ್ದಾರೆ.

ದೆಹಲಿ ಮೂಲದ ಸಮ್ಯಕ್ ಜೈನ್ ಅವರ ದೃಷ್ಟಿ ಕ್ರಮೇಣ ಕ್ಷೀಣಿಸುತ್ತಾ 20ನೇ ವಯಸ್ಸಿಗೆ ಸಂಪೂರ್ಣವಾಗಿ ಕಳೆದುಹೋಯಿತು. ಈ ಆಘಾತ ಯಾರನ್ನಾದರೂ ಕುಗ್ಗಿಸುವಂತದ್ದಾಗಿದ್ದರೂ, ಸಮ್ಯಕ್ ಅದನ್ನು ಸವಾಲಾಗಿ ಸ್ವೀಕರಿಸಿದರು. ಓದನ್ನು ಮುಂದುವರಿಸಿ, ತಮ್ಮ ಗುರಿಯತ್ತ ಅಚಲವಾಗಿ ಹೆಜ್ಜೆ ಹಾಕಿದರು.
ಯುಪಿಎಸ್ಸಿ ತಯಾರಿಯಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರು ಪ್ರಮುಖ ಪಾತ್ರವಹಿಸಿದರು. ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಅವರ ಪೋಷಕರಲ್ಲಿ, ತಂದೆ ವಿದೇಶದಲ್ಲಿದ್ದ ಕಾರಣ ತಾಯಿ ಸದಾ ಅವರೊಂದಿಗೆ ನಿಂತರು. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತಾಯಿಯೇ ಸ್ಕ್ರೈಬ್ (ಉತ್ತರ ಬರೆಯುವ ಸಹಾಯಕ) ಆಗಿ ಕಾರ್ಯನಿರ್ವಹಿಸಿದರೆ, ಮುಖ್ಯ ಪರೀಕ್ಷೆಯಲ್ಲಿ ಸ್ನೇಹಿತೆಯೊಬ್ಬರು ಸಹಾಯ ಮಾಡಿದರು. ತಮ್ಮ ಯಶಸ್ಸಿನ ಶ್ರೇಯಸ್ಸನ್ನು ಸಮ್ಯಕ್ ಜೈನ್ ತಾಯಿಗೆ ಅರ್ಪಿಸಿದ್ದಾರೆ.
ಸಮ್ಯಕ್ ಜೈನ್ ದೆಹಲಿಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಇಂಗ್ಲಿಷ್ ವಿಷಯದಲ್ಲಿ ಪದವಿ ಪಡೆದರು. ನಂತರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (IIMC)ನಲ್ಲಿ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯುಪಿಎಸ್ಸಿಗೆ ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡರು.
ಜೆಎನ್ಯುನಲ್ಲಿ ಓದುತ್ತಿದ್ದಾಗ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಕಂಡು ಸಮ್ಯಕ್ ಜೈನ್ ಅವರಲ್ಲೂ ಯುಪಿಎಸ್ಸಿ ಪರೀಕ್ಷೆ ಬರೆಯುವ ಆಸಕ್ತಿ ಮೂಡಿತು. ಪರೀಕ್ಷೆಯ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ಶ್ರದ್ಧೆಯಿಂದ ಸಿದ್ಧತೆ ಆರಂಭಿಸಿದರು.
ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗದಿದ್ದರೂ ನಿರಾಸೆಯಾಗದೆ ಮತ್ತೆ ಪರೀಕ್ಷೆ ಬರೆದ ಸಮ್ಯಕ್ ಜೈನ್, ಎರಡನೇ ಪ್ರಯತ್ನದಲ್ಲೇ ಅಖಿಲ ಭಾರತ 7ನೇ ರ್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದರು. ಇಷ್ಟು ಉನ್ನತ ರ್ಯಾಂಕ್ ನಿರೀಕ್ಷಿಸಿರಲಿಲ್ಲ ಎಂದು ಫಲಿತಾಂಶದ ಬಳಿಕ ಅವರು ಹೇಳಿಕೊಂಡಿದ್ದಾರೆ.
ಸಮ್ಯಕ್ ಜೈನ್ ಅವರ ಜೀವನಗಾಥೆ, ದೈಹಿಕ ಅಡಚಣೆಗಳು ಕನಸುಗಳಿಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸುವ ಸ್ಪೂರ್ತಿದಾಯಕ ಉದಾಹರಣೆಯಾಗಿದೆ.