ದೆಹಲಿ, ಜು. 14 (DaijiworldNews/AA): ರೈಲ್ವೆ ವಲಯದಲ್ಲಿ ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆಡಳಿತಾತ್ಮಕ ಸುಧಾರಣೆ ಮತ್ತು ಉನ್ನತ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಮೀನು ಸ್ವಾಧೀನ ಪ್ರಕ್ರಿಯೆ ನಿರ್ವಹಣೆ ಸರಳಗೊಳಿಸಲು ರೈಲ್ ಭೂಮಿ ಪೋರ್ಟಲ್ ಶೀಘ್ರ ಜಾರಿಗೊಳಿಸಲಾಗುವುದು. ರಸಗೊಬ್ಬರ ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳ ಹಾರುಬೂದಿ ಸಾಗಣೆಗೆ ಕಂಟೇನರ್ ಬಳಸಲು ಸೂಚಿಸಲಾಗಿದ್ದು, ಇದರಿಂದ ಪರಿಸರ ಮಾಲಿನ್ಯ ತಡೆಗಟ್ಟಿದಂತಾಗುವುದು. ಕಂಟೇನರ್ ಮೂಲಕ ಸಾಗಣೆಗೆ ಏಕೀಕೃತ ಪರವಾನಗಿ ವ್ಯವಸ್ಥೆ ನೀತಿ ರೂಪಿಸಲಾಗಿದೆ" ಎಂದು ತಿಳಿಸಿದರು.
"ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ಸರಕು ಸಾಗಣೆ ಬೋಗಿಗಳ ವಿಶೇಷ ಮತ್ತು ನಿರ್ದಿಷ್ಟ ವಿನ್ಯಾಸಕ್ಕೆ ಅನುಮತಿ ನೀಡಲಾಗಿದೆ. ಇದರ ಅನುಸಾರ ಉತ್ಪಾದಕರು ಅಥವಾ ವಿನ್ಯಾಸಕಾರರು ಬೋಗಿ ವಿನ್ಯಾಸದ ಪ್ರಸ್ತಾಪ ಸಲ್ಲಿಸಬಹುದು. ರೈಲ್ವೆ ವಿನ್ಯಾಸ ಸಂಶೋಧನೆ ಮತ್ತು ಗುಣಮಟ್ಟ ಸಂಸ್ಥೆ - ಆರ್ಡಿಎಸ್ಒ ಈ ಪ್ರಸ್ತಾವ ಪರಿಶೀಲಿಸಿ ಅನುಮತಿ ನಿರ್ಧಾರ ಕೈಗೊಳ್ಳಲಿದೆ. ಮುಂದಿನ ಎರಡು ವರ್ಷಗಳಲ್ಲಿ ರೈಲ್ವೆ ವಲಯದ ಎಲ್ಲ ಯೋಜನೆಗಳಲ್ಲಿ ಕೌಶಲ್ಯ ಪ್ರಮಾಣಪತ್ರ ವ್ಯವಸ್ಥೆ ಅಳವಡಿಸಲಾಗುವುದು" ಎಂದರು.