ಚಿಕ್ಕಬಳ್ಳಾಪುರ, ಜು. 14 (DaijiworldNews/AA): ನ್ಯಾಯಾಧೀಶರ ಕುರ್ಚಿಯ ಮೇಲೆ ವಾಮಾಚಾರ ನಡೆಸಿದ ಆರೋಪದಡಿ ವೃದ್ಧ ಮಹಿಳೆಯೋರ್ವರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಮಂಜುಳಾ(65) ಬಂಧಿತ ಆರೋಪಿ. ಚಿಕ್ಕಬಳ್ಳಾಪುರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದ ಕೋರ್ಟ್ ಹಾಲ್ಗೆ ಪ್ರವೇಶಿಸಿದ್ದ ಆರೋಪಿತೆ, ನ್ಯಾಯಾಧೀಶರ ಕುರ್ಚಿಯ ಮೇಲೆ ಮಂತ್ರಿಸಿದ ಬಿಳಿ ಸಾಸಿವೆ ಕಾಳುಗಳನ್ನು ಎರಚಿದ್ದಾಳೆ ಎನ್ನಲಾಗಿದೆ.
ಇನ್ನು ಎರಡು ದಿನಗಳ ಹಿಂದೆ ಮಹಿಳೆ ವಾಮಾಚಾರ ನಡೆಸಿದ್ದಾಳೆ ಎನ್ನಲಾಗಿರುವ ಘಟನೆ ನ್ಯಾಯಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೆರೆಯಾಗಿರುವ ದೃಶ್ಯದಲ್ಲಿ ಮಹಿಳೆ ನ್ಯಾಯಾಧೀಶರ ಕುರ್ಚಿಯ ಮೇಲೆ ಬಿಳಿ ಸಾಸಿವೆ ಕಾಳುಗಳನ್ನು ಎರಚುತ್ತಿರುವುದು ಕಂಡುಬಂದಿದೆ.
ಈ ಕುರಿತು ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ನೇತ್ರಾ ನೀಡಿದ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯವು ಆರೋಪಿ ಮಹಿಳೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.