ಬೆಂಗಳೂರು, ಜು. 14 (DaijiworldNews/TA): ತಿರುಮಲ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ನಿತ್ಯ ನಡೆಯುವ ಸುಪ್ರಭಾತ ಸೇವೆಯ ಮೊದಲ ಆರತಿ (ಮೊದಲ ಗೌರವ) ವಿಚಾರ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಗೌರವವನ್ನು ಕರ್ನಾಟಕದ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಇತರ ಗಣ್ಯರಿಗೂ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದ ಬೆನ್ನಲ್ಲೇ, ತಿರುಮಲ ತಿರುಪತಿ ದೇವಸ್ಥಾನಂ (TTD) ಸ್ಪಷ್ಟ ವಿರೋಧ ವ್ಯಕ್ತಪಡಿಸಿದೆ.

ಟಿಟಿಡಿ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ ಮಾತನಾಡಿ, "ಮೈಸೂರು ಮಹಾರಾಜರು ತಿರುಮಲ ದೇವಾಲಯಕ್ಕೆ ನೀಡಿದ ಅಪಾರ ದಾನ-ಧರ್ಮ, ಸೇವೆ ಮತ್ತು ಐತಿಹಾಸಿಕ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದಲೇ ಈ ವಿಶೇಷ ಮಾನ್ಯತೆ ನೀಡಲಾಗಿದೆ. ಬಳಿಕ ಈ ಹಕ್ಕು ಅವರ ಅಧಿಕೃತ ಪ್ರತಿನಿಧಿಗಳಿಗೆ ಮುಂದುವರಿದಿದೆ. ಈ ಗೌರವವನ್ನು ಬೇರೆ ಯಾರಿಗೂ ವಿಸ್ತರಿಸಲು ಸಾಧ್ಯವಿಲ್ಲ,"ಎಂದು ತಿಳಿಸಿದ್ದಾರೆ.
ಅವರು, "ಕರ್ನಾಟಕ ಸರ್ಕಾರ ಶಿಫಾರಸು ಮಾಡಿದರೂ ಸಂಪ್ರದಾಯ ಮತ್ತು ಐತಿಹಾಸಿಕ ಹಕ್ಕಿನ ಆಧಾರದ ಮೇಲೆ ಇರುವ ಈ ವ್ಯವಸ್ಥೆಯನ್ನು ಬದಲಾಯಿಸಲು ಅವಕಾಶವಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಏಕಪಕ್ಷೀಯವಾಗಿದೆ ಎಂಬ ಅಭಿಪ್ರಾಯವೂ ಟಿಟಿಡಿ ಟ್ರಸ್ಟ್ ವಲಯದಲ್ಲಿ ವ್ಯಕ್ತವಾಗಿದೆ. ಇಂತಹ ಬದಲಾವಣೆಗೆ ಅವಕಾಶ ನೀಡಿದರೆ ಇತರ ರಾಜ್ಯಗಳಿಂದಲೂ ಇದೇ ರೀತಿಯ ಬೇಡಿಕೆಗಳು ಬರಬಹುದಾದ ಕಾರಣ, ಸಂಪ್ರದಾಯದಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ಮೊದಲ ಆರತಿಯ ವಿಶೇಷತೆ ಏನು? : ತಿರುಮಲದಲ್ಲಿ ಪ್ರತಿದಿನ ಬೆಳಗ್ಗೆ ನಡೆಯುವ ಸುಪ್ರಭಾತ ಸೇವೆಯ ವೇಳೆ ಶ್ರೀ ವೆಂಕಟೇಶ್ವರ ಸ್ವಾಮಿಗೆ ಸಲ್ಲಿಸುವ ಮೊದಲ ಗೌರವವು ಮೈಸೂರು ರಾಜವಂಶಕ್ಕೆ ಐತಿಹಾಸಿಕವಾಗಿ ಮೀಸಲಾಗಿದೆ. ದೇವಾಲಯದಲ್ಲಿರುವ ಬ್ರಹ್ಮದೀಪ, ಮಹಾರಾಜ ದೀಪ ಹಾಗೂ ಅಖಂಡ ದೀಪಗಳಿಗೆ ಪ್ರತಿನಿತ್ಯ ಪರಿಶುದ್ಧ ತುಪ್ಪವನ್ನು ಸಮರ್ಪಿಸುವ ಸಂಪ್ರದಾಯ ಮೈಸೂರು ಸಂಸ್ಥಾನದ ಕಾಲದಿಂದಲೇ ನಡೆದುಕೊಂಡು ಬಂದಿದೆ. ಇಂದಿಗೂ ಕರ್ನಾಟಕ ಸರ್ಕಾರದ ಪರವಾಗಿ ನಿಯೋಜಿತ ವಿಶೇಷ ಅಧಿಕಾರಿಯೊಬ್ಬರು ಮೊದಲ ಆರತಿಯಲ್ಲಿ ಪಾಲ್ಗೊಂಡು ರಾಜ್ಯದ ಪರವಾಗಿ ಗೌರವ ಸ್ವೀಕರಿಸುವ ಸಂಪ್ರದಾಯ ಮುಂದುವರಿದಿದೆ. ಇದೇ ವ್ಯವಸ್ಥೆಯನ್ನು ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ಇದೀಗ ಟಿಟಿಡಿ ಸ್ಪಷ್ಟ ವಿರೋಧ ವ್ಯಕ್ತಪಡಿಸಿದೆ.