ನವದೆಹಲಿ, ಜು. 14 (DaijiworldNews/AA): ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯ ಓರ್ವ ನಾವಿಕ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆ ಭಾರತ ಇರಾನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಭಾರತ ಇರಾನಿನ ರಾಯಭಾರಿಗೆ ಸಮನ್ಸ್ ನೀಡಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಭಾರತದ 2 ವಾಣಿಜ್ಯ ಹಡಗುಗಳಾದ 'ಎಂವಿ ಅಲ್ ಬಾಹಿಯಾ' ಮತ್ತು 'ಎಂವಿ ಮೊಂಬಾಸಾ' ಮೇಲೆ ದಾಳಿ ನಡೆಸಿತ್ತು. ಈ ದಾಳಿಯನ್ನು ಖಂಡಿಸಿರುವ ಭಾರತ, ಹಡಡುಗಳ ಮೇಲಿನ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದೆ. ಜೊತೆಗೆ ಈ ದಾಳಿಯನ್ನು ನಾವಿಕರನ್ನು ಗುರಿಯಾಗಿಸಿಕೊಂಡು ನಡೆಸಲಾದ ಹಿಂಸಾತ್ಮಕ ಕೃತ್ಯ ಎಂದು ಅಸಮಾಧಾನ ಹೊರಹಾಕಿದೆ.
ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವ ಇಂತಹ ದಾಳಿಗಳು ತಕ್ಷಣವೇ ನಿಲ್ಲಬೇಕು. ಹೀಗೆ ಸಿಕ್ಕ ಸಿಕ್ಕ ಹಡಗುಗಳ ಮೇಲೆ ದಾಳಿ ನಡೆಸುವ ಬದಲಾಗಿ ಪಶ್ಚಿಮ ಏಷ್ಯಾದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆಯನ್ನು ಮರುಸ್ಥಾಪಿಸಲು ಎಲ್ಲಾ ಕಡೆಯವರು ತಕ್ಷಣವೇ ಹಗೆತನವನ್ನು ಕೊನೆಗೊಳಿಸಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಹಾದಿಗೆ ಮರಳಬೇಕು. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಮುಕ್ತ ಸಮುದ್ರ ವ್ಯಾಪಾರ ಮತ್ತು ನೌಕಾಯಾನ ಮುಂದುವರಿಯಲು ವಾಣಿಜ್ಯ ಹಡಗುಗಳು ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ನಿಲ್ಲಲೇಬೇಕು ಎಂದು ವಿದೇಶಾಂಗ ಸಚಿವಾಲಯ ಕಠಿಣ ಸಂದೇಶ ರವಾನಿಸಿದೆ.