ಆಗುಂಬೆ, ಜು. 14 (DaijiworldNews/TA): ಸಾಮಾನ್ಯವಾಗಿ ಏಡಿಗಳು ನದಿ, ಹಳ್ಳ, ಕೆರೆ, ಗದ್ದೆಗಳ ಬದಿಯ ಮಣ್ಣಿನಲ್ಲಿ ಬಿಲ ತೋಡಿ ವಾಸಿಸುವುದು ಸಹಜ. ಆದರೆ ಮರದ ಮೇಲೆಯೇ ಜೀವನ ಸಾಗಿಸುವ ಅಪರೂಪದ ಸಿಹಿನೀರಿನ ಏಡಿ ಪ್ರಭೇದವೊಂದು ಶಿವಮೊಗ್ಗ ಜಿಲ್ಲೆಯ ಆಗುಂಬೆ ಮಳೆಕಾಡಿನಲ್ಲಿ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಇದೇ ಮೊದಲ ದಾಖಲೆಯಾಗಿದೆ. ಈ ಸಂಶೋಧನೆಯು ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಅಧ್ಯಯನದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ.

ಅಪರೂಪದ ಈ ಜೀವಿಯನ್ನು ವನ್ಯಜೀವಿ ಸಂಶೋಧಕರಾದ ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ಅವರ ಅಧ್ಯಯನದ ವೇಳೆ ಗುರುತಿಸಲಾಗಿದೆ. 'ಕನಿ ಮರನಂಡು' ಎಂದು ಕರೆಯಲಾಗುವ ಈ ಮರವಾಸಿ ಸಿಹಿನೀರಿನ ಏಡಿ ಇದುವರೆಗೆ ಕರ್ನಾಟಕದಲ್ಲಿ ದಾಖಲಾಗಿರಲಿಲ್ಲ. ಇದರ ಪತ್ತೆಯಿಂದ ಪಶ್ಚಿಮ ಘಟ್ಟದ ವಿವಿಧ ಭಾಗಗಳಲ್ಲಿ ಇನ್ನೂ ಅನೇಕ ಅಪರೂಪದ ಜೀವಿಗಳು ಅಡಗಿರಬಹುದೆಂಬ ನಿರೀಕ್ಷೆ ಮೂಡಿದೆ.
'ಕನಿ ಮರನಂಡು' ಪ್ರಭೇದವನ್ನು 2017ರಲ್ಲಿ ಕೇರಳದ ಆಗಸ್ತ್ಯಮಲೆ ಜೈವಿಕ ವಲಯದಲ್ಲಿ ಮೊದಲ ಬಾರಿಗೆ ವೈಜ್ಞಾನಿಕವಾಗಿ ದಾಖಲಿಸಲಾಗಿತ್ತು. ಆ ಬಳಿಕ ಈ ಏಡಿ ದಕ್ಷಿಣ ಕೇರಳದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ ಎಂದು ವಿಜ್ಞಾನಿಗಳು ಭಾವಿಸಿದ್ದರು. ಆದರೆ ಇದೀಗ ಆಗುಂಬೆ ಮಳೆಕಾಡಿನಲ್ಲಿ ಇದರ ಇರುವಿಕೆ ದೃಢಪಟ್ಟಿರುವುದು, ಈ ಪ್ರಭೇದದ ವ್ಯಾಪ್ತಿ ಪಶ್ಚಿಮ ಘಟ್ಟದ ಇನ್ನಷ್ಟು ಪ್ರದೇಶಗಳಿಗೂ ವಿಸ್ತರಿಸಿರಬಹುದೆಂಬ ಹೊಸ ಸಾಧ್ಯತೆಯನ್ನು ತೆರೆದಿದೆ.
ಸಾಮಾನ್ಯ ಏಡಿಗಳಂತೆ ನೆಲದಲ್ಲಿ ಬಿಲ ತೋಡಿ ವಾಸಿಸುವ ಬದಲು, ಈ ಅಪರೂಪದ ಏಡಿ ದೊಡ್ಡ ಮರಗಳ ಕಾಂಡಗಳಲ್ಲಿ ಮಳೆನೀರು ಸಂಗ್ರಹವಾಗುವ ನೈಸರ್ಗಿಕ ಕುಳಿಗಳನ್ನೇ ತನ್ನ ಆಶ್ರಯವಾಗಿಸಿಕೊಂಡಿದೆ. ಆ ಕುಳಿಗಳಿಗೆ ಬೀಳುವ ಕೀಟಗಳು, ಒಣ ಎಲೆಗಳು, ಹಣ್ಣಿನ ಬೀಜಗಳು ಹಾಗೂ ಇತರ ಸಾವಯವ ಅವಶೇಷಗಳೇ ಇದರ ಪ್ರಮುಖ ಆಹಾರ.
ಮರದ ಮೇಲಿನ ಜೀವನಕ್ಕೆ ಹೊಂದಿಕೊಳ್ಳುವಂತೆ ಈ ಏಡಿಗೆ ಉದ್ದವಾದ ಕಾಲುಗಳು ಹಾಗೂ ಬಾಗಿದ, ಚೂಪಾದ ಉಗುರುಗಳಿವೆ. ಅಪಾಯದ ಸುಳಿವು ಸಿಕ್ಕ ಕೂಡಲೇ ಕ್ಷಣಾರ್ಧದಲ್ಲಿ ಮರದ ಕುಳಿಯೊಳಗೆ ಅಡಗಿಕೊಳ್ಳುವ ಸಾಮರ್ಥ್ಯವೂ ಇದಕ್ಕಿದೆ. 'ಕನಿ ಮರನಂಡು' ಸಾಮಾನ್ಯ ಸಿಹಿನೀರಿನ ಏಡಿಗಳಿಗಿಂತ ಸಂಪೂರ್ಣ ವಿಭಿನ್ನವಾಗಿ ಕಾಣುತ್ತದೆ. ಇದರ ದೇಹ ನೀಲಿ ಮಿಶ್ರಿತ ಕಪ್ಪು ಬಣ್ಣದಲ್ಲಿದ್ದು, ಕೊಂಡಿಗಳು ಹಳದಿ ಹಾಗೂ ಕಿತ್ತಳೆ ಬಣ್ಣದ ಸಂಯೋಜನೆಯನ್ನು ಹೊಂದಿವೆ. ಜೇಡವನ್ನು ನೆನಪಿಸುವ ಉದ್ದನೆಯ ಕಾಲುಗಳು ಮರಗಳನ್ನು ಸುಲಭವಾಗಿ ಹತ್ತಲು ನೆರವಾಗುತ್ತವೆ. ಈ ವಿಶಿಷ್ಟ ದೇಹರಚನೆಯೇ ಮರವಾಸಿ ಜೀವನಕ್ಕೆ ಹೊಂದಿಕೊಳ್ಳಲು ಪ್ರಮುಖ ಕಾರಣವಾಗಿದೆ.
ಸಂಶೋಧಕರ ಪ್ರಕಾರ, ಈ ಏಡಿ ದೊಡ್ಡ ಮರಗಳು ಹಾಗೂ ಮಳೆನೀರು ತುಂಬಿರುವ ನೈಸರ್ಗಿಕ ಕುಳಿಗಳ ಮೇಲೆ ಸಂಪೂರ್ಣ ಅವಲಂಬಿತವಾಗಿದೆ. ಹೀಗಾಗಿ ಕಾಡು ನಾಶ, ಹಳೆಯ ಮರಗಳ ಕಡಿತ, ಹವಾಮಾನ ಬದಲಾವಣೆ ಹಾಗೂ ಮಳೆಯ ಪ್ರಮಾಣದಲ್ಲಿನ ವ್ಯತ್ಯಾಸ ಈ ಅಪರೂಪದ ಜೀವಿಯ ಅಸ್ತಿತ್ವಕ್ಕೆ ಗಂಭೀರ ಬೆದರಿಕೆಯಾಗಬಹುದು. ಈ ಸಂಶೋಧನೆಯು ಪಶ್ಚಿಮ ಘಟ್ಟದಲ್ಲಿ ಇನ್ನೂ ವೈಜ್ಞಾನಿಕವಾಗಿ ದಾಖಲಾಗದ ಅನೇಕ ಜೀವಿಗಳು ಅಡಗಿರುವ ಸಾಧ್ಯತೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
'ಭಾರತದ ಚಿರಾಪುಂಜಿ' ಎಂದೇ ಖ್ಯಾತಿ ಪಡೆದ ಆಗುಂಬೆ ಈಗಾಗಲೇ ಕಿಂಗ್ ಕೋಬ್ರಾ, ಅಪರೂಪದ ಕಪ್ಪೆಗಳು, ಉಭಯಚರಗಳು ಹಾಗೂ ಸಮೃದ್ಧ ಜೀವ ವೈವಿಧ್ಯಕ್ಕಾಗಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇದೀಗ ಕರ್ನಾಟಕದಲ್ಲೇ ಮೊದಲ ಬಾರಿಗೆ ಮರವಾಸಿ ಸಿಹಿನೀರಿನ ಏಡಿ ಪತ್ತೆಯಾಗಿರುವುದು ಆಗುಂಬೆಯ ಪರಿಸರ ಹಾಗೂ ವೈಜ್ಞಾನಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.