ಬೆಂಗಳೂರು, ಜು. 14 (DaijiworldNews/TA): ಕರ್ನಾಟಕ ರಾಜ್ಯ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ಯಲ್ಲಿ ರಾಷ್ಟ್ರಕವಿ ಕುವೆಂಪು ಅವರು ಮೂಲತಃ ಬಳಸಿದ್ದ ‘ಬೌದ್ಧ’ ಪದವನ್ನು ಮರು ಸೇರ್ಪಡೆಗೊಳಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ನಾಡಗೀತೆಯಲ್ಲಿ ಬದಲಾವಣೆ ತರಲು ಸರ್ಕಾರ ಮುಂದಾಗಿದೆ.

ಸಮಿತಿಯ ಶಿಫಾರಸಿನ ಪ್ರಕಾರ, ಪ್ರಸ್ತುತ ಬಳಕೆಯಲ್ಲಿರುವ ‘ಜೈನರುದ್ಯಾನ’ ಎಂಬ ಪದದ ಬದಲಿಗೆ ‘ಜೈನಬೌದ್ಧರುದ್ಯಾನ’ ಎಂಬ ಮೂಲ ಪದವನ್ನು ಸೇರಿಸಲು ಸಲಹೆ ನೀಡಲಾಗಿದೆ. ಕುವೆಂಪು ಅವರು ರಚಿಸಿದ್ದ ಮೂಲ ಗೀತೆಯಲ್ಲಿ ‘ಬೌದ್ಧ’ ಪದವಿದ್ದರೂ, ನಂತರದ ಅವಧಿಯಲ್ಲಿ ಅದು ಕೈಬಿಡಲಾಗಿತ್ತು. ಇದೀಗ ಮೂಲ ಸಾಹಿತ್ಯದ ಆಶಯವನ್ನು ಪುನಃ ಪ್ರತಿಬಿಂಬಿಸುವ ಉದ್ದೇಶದಿಂದ ಅದನ್ನು ಮರು ಸೇರಿಸುವ ಪ್ರಸ್ತಾವನೆ ಬಂದಿದೆ.
ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’ ಪದ ಸೇರ್ಪಡೆಯಾಗುವ ಹಿನ್ನೆಲೆಯಲ್ಲಿ, ಗೀತೆಯನ್ನು ಹಾಡುವಾಗ ಮೈಸೂರು ಅನಂತಸ್ವಾಮಿ ಅವರ ರಾಗ-ಧಾಟಿಯಲ್ಲೇ ಹೊಸ ಪದವನ್ನು ಒಳಗೊಂಡಂತೆ ಸಂಗೀತ ಸಂಯೋಜನೆ ರೂಪಿಸಲು ಸಮಿತಿ ಶಿಫಾರಸು ಮಾಡಿದೆ. ಈ ಕುರಿತು ರಚಿಸಲಾದ ಸಮಿತಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸೇರಿದಂತೆ ನಿವೃತ್ತ ಕುಲಪತಿಗಳಾದ ಡಾ. ಚಿದಾನಂದ ಗೌಡ, ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಕಾಳೇಗೌಡ ನಾಗವಾರ, ಎಸ್.ಜಿ. ಸಿದ್ದರಾಮಯ್ಯ, ಡಾ. ಮೂಡ್ನಕೂಡು ಚಿನ್ನಸ್ವಾಮಿ, ಡಾ. ಸಿ.ಎಸ್. ದ್ವಾರಕನಾಥ್, ಡಾ. ಮೀನಾಕ್ಷಿ ಬಾಳಿ ಹಾಗೂ ಡಾ. ಎಂ.ಎಸ್. ಆಶಾದೇವಿ ಸದಸ್ಯರಾಗಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರು ತಮ್ಮ 20ನೇ ವಯಸ್ಸಿನಲ್ಲಿ, 1924ರಲ್ಲಿ ‘ಕೀಶೋರಚಂದ್ರವಾಣಿ’ ಎಂಬ ಕಾವ್ಯನಾಮದಲ್ಲಿ ‘ಜಯ ಭಾರತ ಜನನಿಯ ತನುಜಾತೆ’ ಗೀತೆಯನ್ನು ರಚಿಸಿದ್ದರು. ನಂತರ ಅದು ಅವರ ಪ್ರಸಿದ್ಧ ‘ಕೊಳಲು’ ಕವನ ಸಂಕಲನದಲ್ಲಿ ಪ್ರಕಟವಾಗಿತ್ತು. ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾಗಿರುವ ಈ ನಾಡಗೀತೆ ಕಳೆದ ವರ್ಷ ಶತಮಾನೋತ್ಸವವನ್ನು ಆಚರಿಸಿಕೊಂಡಿದ್ದು, ರಾಜ್ಯಾದ್ಯಂತ ವಿಶೇಷ ಕಾರ್ಯಕ್ರಮಗಳ ಮೂಲಕ ಗೌರವ ಸಲ್ಲಿಸಲಾಗಿತ್ತು. ಸರ್ಕಾರ ಸಮಿತಿಯ ಶಿಫಾರಸನ್ನು ಅಂಗೀಕರಿಸಿದ ಬಳಿಕ ನಾಡಗೀತೆಯ ಪರಿಷ್ಕೃತ ರೂಪದ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.