ನವದೆಹಲಿ, ಜು. 14 (DaijiworldNews/AA): ನನ್ನ ಗಮನ ದೇಶದ ಹಿತಾಸಕ್ತಿಯ ಮೇಲಿದೆ. ವೈಯಕ್ತಿಕ ಲಾಭಕ್ಕಾಗಿ ನಾನು ಎಥೆನಾಲ್ ಪರ ಮಾತನಾಡುತ್ತಿಲ್ಲ. ಇದು ದೇಶಕ್ಕೆ, ಸಮಾಜಕ್ಕೆ ಮತ್ತು ರೈತರಿಗೆ ಪ್ರಯೋಜನಕಾರಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ತಮ್ಮ ವಿರುದ್ಧದ ವೈಯಕ್ತಿಕ ಆರೋಪಗಳ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಟೀಕೆಗಳಿಂದ ತಾವು ವಿಚಲಿತರಾಗಿಲ್ಲ. ಪಳೆಯುಳಿಕೆ ಇಂಧನ ಆಮದನ್ನು ಕಡಿಮೆ ಮಾಡುವುದು, ಮಾಲಿನ್ಯ ನಿಯಂತ್ರಿಸುವುದು ಹಾಗೂ ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿಸುವುದೇ ತಮ್ಮ ಗುರಿ" ಎಂದರು.
"ಮೊದಲು ಎಥೆನಾಲ್ ಹಾಗೂ ಪರ್ಯಾಯ ಇಂಧನಗಳನ್ನು ಏಕೆ ಉತ್ತೇಜಿಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಭಾರತವು ಪ್ರತಿ ವರ್ಷ ಸುಮಾರು 22 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪಳೆಯುಳಿಕೆ ಇಂಧನವನ್ನು ಆಮದು ಮಾಡಿಕೊಳ್ಳುತ್ತದೆ. ಈ ಹಣ ದೇಶದಿಂದ ಹೊರಹೋಗುತ್ತದೆ. ಜೊತೆಗೆ ಇವು ಪರಿಸರ ಮಾಲಿನ್ಯಕ್ಕೂ ಪ್ರಮುಖ ಕಾರಣ. ನನ್ನ ಉದ್ದೇಶ ಆಮದನ್ನು ಕಡಿಮೆ ಮಾಡುವುದು, ಮಾಲಿನ್ಯ ತಗ್ಗಿಸುವುದು ಮತ್ತು ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿಸುವುದು" ಎಂದು ಹೇಳಿದರು.
"ಎಥೆನಾಲ್ ಉತ್ಪಾದನೆಯಿಂದ ನಾನು ವೈಯಕ್ತಿಕವಾಗಿ ಲಾಭ ಪಡೆಯುತಿದ್ದೇನೆ ಎಂಬ ಆರೋಪ ಸಂಪೂರ್ಣ ಆಧಾರರಹಿತ. ಸರ್ಕಾರ ಟೆಂಡರ್ ಮೂಲಕ ಎಥೆನಾಲ್ ಖರೀದಿಸುತ್ತದೆ. ದರವನ್ನು ಸಚಿವ ಸಂಪುಟವೇ ನಿಗದಿಪಡಿಸುತ್ತದೆ. ಯಾವ ಕಂಪನಿಗೆ ಗುತ್ತಿಗೆ ಸಿಗಬೇಕು ಎಂಬುದರಲ್ಲಿ ನನಗೆ ಯಾವುದೇ ಪಾತ್ರವಿಲ್ಲ" ಎಂದು ತಿಳಿಸಿದರು.
"ರಾಜಕೀಯದಲ್ಲಿ ನಾನು ಹಿಂದೆಯೂ ಟೀಕೆಗಳನ್ನು ಎದುರಿಸಿದ್ದೇನೆ. ಆದರೆ ಸತ್ಯವನ್ನು ಜನ ಅರ್ಥಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಆಮದು ಕಡಿಮೆ ಮಾಡುವ, ಮಾಲಿನ್ಯ ನಿಯಂತ್ರಿಸುವ ಹಾಗೂ ರೈತರ ಆದಾಯ ಹೆಚ್ಚಿಸುವ ನೀತಿಯನ್ನು ಮುಂದುವರಿಸಲೇಬೇಕು" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಮುಂದಿನ ದಿನಗಳಲ್ಲಿ ಎಲ್ಲಾ ಹೆದ್ದಾರಿ ಸೂಚನಾ ಫಲಕಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುವುದು. ಪ್ರಯಾಣಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಂಬಂಧಿತ ಹೆದ್ದಾರಿಯ ಮಾಹಿತಿ, ಸಮೀಪದ ಪೆಟ್ರೋಲ್ ಬಂಕ್, ವಿಶ್ರಾಂತಿ ಕೇಂದ್ರ, ಹೋಟೆಲ್ ಸೇರಿದಂತೆ ಅಗತ್ಯ ಸೇವೆಗಳ ವಿವರಗಳನ್ನು ಮೊಬೈಲ್ನಲ್ಲೇ ಪಡೆಯಬಹುದು" ಎಂದು ಮಾಹಿತಿ ನೀಡಿದರು.
"ಈ ವ್ಯವಸ್ಥೆಯಿಂದ ದೂರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಈ ವರ್ಷವೇ ಸುಮಾರು 10 ಶೇಕಡಾ ದೂರುಗಳು ಇಳಿಕೆಯಾಗಲಿದ್ದು, ಇನ್ನೆರಡು ವರ್ಷಗಳಲ್ಲಿ ಇಂತಹ ದೂರುಗಳು ಬಹುತೇಕ ಇಲ್ಲದಂತಾಗಲಿವೆ" ಎಂದು ವಿವರಿಸಿದರು.