ಚಿಕ್ಕಬಳ್ಳಾಪುರ,ಜು. 14 (DaijiworldNews/AK): ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ಆಟವಾಡುತ್ತಾ ಗ್ರಿಲ್ ಹತ್ತಿದ್ದ 4 ವರ್ಷದ ಮಗು ಆಯತಪ್ಪಿ ಕೆಳಗೆ ಬಿದ್ದು, ಸ್ಥಿತಿ ಗಂಭೀರವಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ನಾರಾಯಣಸ್ವಾಮಿ-ಮಧು ದಂಪತಿಯ ಪುತ್ರಿ ಗಗನ ಸಿಂಧು ಪೋಷಕರೊಂದಿಗೆ ಬಟ್ಟೆ ಖರೀದಿಸಲು ಅಂಗಡಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಪೋಷಕರು ಖರೀದಿಯಲ್ಲಿ ನಿರತರಾಗಿದ್ದ ಸಮಯದಲ್ಲಿ ಮಗು ಅಂಗಡಿಯ ಗ್ರಿಲ್ ಮೇಲೆ ಹತ್ತಿ ಆಟವಾಡುತ್ತಿತ್ತು. ಈ ವೇಳೆ ಒಂದೆರಡು ಬಾರಿ ತಾಯಿ ಮಗುವನ್ನು ಒಳಗೆ ಕರೆದುಕೊಂಡು ಹೋಗಿದ್ದರು. ಆದರೂ ಮತ್ತೆ ಗ್ರಿಲ್ ಬಳಿ ಬಂದಿದ್ದ ಬಾಲಕಿ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ.
ತಕ್ಷಣವೇ ಗಾಯಗೊಂಡ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.