ಬೆಂಗಳೂರು, ಜು. 13 (DaijiworldNews/AK): ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನೆರವೇರಿಸಲಾಗುವ ಮೊದಲ ಆರತಿ ಸಾಂಪ್ರದಾಯಿಕವಾಗಿ ಕರ್ನಾಟಕ ರಾಜ್ಯದ ಹೆಸರಿನಲ್ಲೇ ಸಲ್ಲಿಕೆಯಾಗುತ್ತಿರುವ ವಿಶೇಷ ಶಿಷ್ಟಾಚಾರಕ್ಕೆ ಇದೀಗ ಹೊಸ ಆಯಾಮ ದೊರೆಯುತ್ತಿದೆ.

ಈವರೆಗೆ ಈ ಆರತಿ ವೇಳೆ ಕರ್ನಾಟಕ ಸರ್ಕಾರದ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಿದ್ದರೆ, ಇನ್ನು ಮುಂದೆ ರಾಜ್ಯದ ಸಚಿವರು, ಶಾಸಕರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ತಿರುಮಲ ತಿರುಪತಿ ದೇವಸ್ಥಾನಂ ನಿಗದಿಪಡಿಸಿರುವ ಮಾರ್ಗಸೂಚಿಗಳ ಅನ್ವಯವೇ ಈ ಅವಕಾಶ ನೀಡಲಾಗುತ್ತಿದ್ದು, ಶಿಷ್ಟಾಚಾರ ಹಾಗೂ ಸಂಪ್ರದಾಯಕ್ಕೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಟಿಟಿಡಿ ಮಾರ್ಗಸೂಚಿಗಳ ಪ್ರಕಾರವೇ ಎಲ್ಲ ವ್ಯವಸ್ಥೆಗಳು ನಡೆಯಲಿದ್ದು, ಸಂಪ್ರದಾಯವನ್ನು ಗೌರವಿಸುವ ರೀತಿಯಲ್ಲೇ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ತಿರುಪತಿ ದೇವಸ್ಥಾನದಲ್ಲಿ ಕರ್ನಾಟಕದ ಹೆಸರಿನಲ್ಲಿ ಮೊದಲ ಆರತಿ ಸಲ್ಲಿಸುವ ಸಂಪ್ರದಾಯಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಇದು ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿದೆ. ಈ ಶಿಷ್ಟಾಚಾರ ಕರ್ನಾಟಕ ಮತ್ತು ತಿರುಮಲ ದೇವಾಲಯದ ನಡುವಿನ ಧಾರ್ಮಿಕ ಹಾಗೂ ಐತಿಹಾಸಿಕ ಬಾಂಧವ್ಯದ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಇದೀಗ ರಾಜ್ಯದ ಗಣ್ಯರಿಗೂ ಈ ಶಿಷ್ಟಾಚಾರದಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತಿರುವುದು ಕರ್ನಾಟಕದ ಪಾಲಿಗೆ ಮತ್ತೊಂದು ವಿಶೇಷ ಗೌರವದ ಸಂಗತಿ.