ಬೆಂಗಳೂರು, ಜು. 13 (DaijiworldNews/AA): ನಮ್ಮ ದೇಶದ ವಿದೇಶಾಂಗ ನೀತಿಯನ್ನು ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಡವಿಟ್ಟು ಬಂದಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಹಾರ್ಮುಜ್ ಜಲಸಂಧಿ ವಿಚಾರವಾಗಿ ಮತ್ತೆ ಯುದ್ಧದ ವಾತಾವರಣ ಸೃಷ್ಟಿಯಾಗಿರುವ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, "ನಮ್ಮ ದೇಶದಲ್ಲಿ ವಿದೇಶಾಂಗ ಸಚಿವರು ಇದ್ದಾರೋ ಇಲ್ಲವೋ? ಅಸಲು ನಮಗೊಂದು ವಿದೇಶಾಂಗ ನೀತಿ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.
"ಕಳೆದ ಬಾರಿ ಅಮೆರಿಕ-ಇರಾನ್ ಸಂಘರ್ಷದ ವೇಳೆ ಭಾರತ ಎಷ್ಟು ತೊಂದರೆ ಅನುಭವಿಸಿತು ಎಂಬುದು ಎಲ್ಲರಿಗೂ ಗೊತ್ತಿದೆ. ಆಗಿನ ಸಚಿವರು ಜನರನ್ನು ದಾರಿ ತಪ್ಪಿಸಿದ್ದರು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 100 ಡಾಲರ್ ಇದ್ದಾಗ ಇಲ್ಲಿ ಇಂಧನ ಬೆಲೆ ಏರಿಸಿದವರು, ಅದು 40 ಡಾಲರ್ಗೆ ಕುಸಿದಾಗ ಬೆಲೆ ಇಳಿಸಲಿಲ್ಲ" ಎಂದು ಕಿಡಿಕಾರಿದರು.
"ಪ್ರಧಾನ ಮಂತ್ರಿಗಳು ವಿದೇಶಕ್ಕೆ ಹೋಗುವುದು ರೀಲ್ಸ್ ಮಾಡೋಕಾ ಅಥವಾ ದೇಶದ ನೀತಿ ರೂಪಿಸೋಕಾ? ಇಷ್ಟೊಂದು ದೇಶ ಸುತ್ತಿದ್ದರೂ, ಸಾಲು ಸಾಲು ಜಾಗತಿಕ ಪ್ರಶಸ್ತಿಗಳು ಬಂದಿದ್ದರೂ ಅದರಿಂದ ಸಾಮಾನ್ಯ ಭಾರತೀಯರಿಗೆ ಆದ ಲಾಭವಾದರೂ ಏನು? ಮೋದಿಯವರ ವಿದೇಶಿ ಪ್ರವಾಸಗಳು ಕೇವಲ ಅದಾನಿ-ಅಂಬಾನಿ ಉದ್ಯಮವನ್ನು ವೃದ್ಧಿಸಲು ನೆರವಾಗುತ್ತಿವೆಯೇ ಹೊರತು ದೇಶದ ಜನರಿಗಲ್ಲ. ಈ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರೀಕ್ಷೆಗಳಿಲ್ಲ" ಎಂದಿದ್ದಾರೆ.