ನವದೆಹಲಿ, ಜು. 13 (DaijiworldNews/AK): ಚಲಿಸುತ್ತಿದ್ದ ರೈಲಿನಲ್ಲಿ ಪೂಜೆ ಮಾಡುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಭಾರತೀಯ ರೈಲ್ವೆ ಸ್ಪಷ್ಟನೆ ನೀಡಿದೆ. 3 ಲಕ್ಷ ರೂ. ಹೆಚ್ಚಿನ ಹಣ ನೀಡಿ ಖಾಸಗಿ ಕೋಚ್ನ್ನು ಬುಕ್ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

ಈ ಕುರಿತು ಭಾರತೀಯ ರೈಲ್ವೆ ಉತ್ತರ ವಿಭಾಗ ಮಾಹಿತಿ ಹಂಚಿಕೊಂಡಿದೆ. ಪೂಜೆ ನಡೆದಿರುವುದು ರೈಲಿನ ಸಾಮಾನ್ಯ ಬೋಗಿಯಲ್ಲಲ್ಲ. ಬದಲಿಗೆ ವ್ಯಕ್ತಿಯೊಬ್ಬರು 3 ಲಕ್ಷ ರೂ.ಗೂ ಅಧಿಕ ಹಣ ನೀಡಿ ಐಆರ್ಸಿಟಿಸಿ ವೆಬ್ಸೈಟ್ನ ವಾಣಿಜ್ಯ ಬುಕ್ಕಿಂಗ್ ವ್ಯವಸ್ಥೆಯ ಮೂಲಕ ಐಷಾರಾಮಿ ಕೋಚ್ನ್ನು (Saloon Coah) ಬುಕ್ ಮಾಡಿದ್ದರು. ಅದರಂತೆ ಆ ಬೋಗಿಯನ್ನು ರೈಲಿಗೆ ಜೋಡಿಸಿದ್ದರು. ಹಾಗಾಗಿ ಆ ಬೋಗಿಯಲ್ಲಿ ಕಾರ್ಯಕ್ರಮ ನಡೆಸಿರುವುದು ಕಾನೂನುಬದ್ಧ ಎಂದು ತಿಳಿಸಿದೆ.
ಜುಲೈ 8ರಂದು ಐಆರ್ಸಿಟಿಸಿ ಮೂಲಕ ಐಷಾರಾಮಿ ಕೋಚ್ನ್ನು ಬುಕ್ ಮಾಡಲಾಗಿದೆ. ಅಲ್ಲದೇ ಬುಕ್ ಮಾಡಿದವರು 3,08,580 ರೂ. ಮುಂಗಡ ಪಾವತಿ ಮಾಡಿದ್ದಾರೆ. ಹೀಗಾಗಿ ಜುಲೈ 10ರಂದು ನವದೆಹಲಿಯಿಂದ ಮುಂಬೈಗೆ ಏಕಮುಖ ಪ್ರಯಾಣಕ್ಕಾಗಿ ರೈಲು ಸಂಖ್ಯೆ 12926 ಪಶ್ಚಿಮ್ ಎಕ್ಸ್ಪ್ರೆಸ್ಗೆ ಈ ಐಷಾರಾಮಿ ಕೋಚ್ ಜೋಡಿಸಲಾಗಿತ್ತು. ಇದರಿಂದ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದೆ.
ಸಲೂನ್ ಕೋಚ್ ಸಾಮಾನ್ಯ ರೈಲಿನ ಬೋಗಿಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಇದರಲ್ಲಿ ಸುಸಜ್ಜಿತವಾದ ಲಿವಿಂಗ್ ರೂಮ್, ಎರಡು ಬೆಡ್ರೂಮ್ಗಳು, ಬಾತ್ರೂಮ್ಗಳು, ಅಡುಗೆ ಕೋಣೆ ಮತ್ತು ಡೈನಿಂಗ್ ಟೇಬಲ್ ಇರುತ್ತವೆ. ಇದು ಹೋಟೆಲ್ ರೂಮ್ ಅಥವಾ ಒಂದು ಚಿಕ್ಕ ಮನೆಯಂತೆ ಇದ್ದು, ವಿಶೇಷ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಹೆಚ್ಚಿನ ಸೌಕರ್ಯವನ್ನು ನೀಡುತ್ತದೆ.
ಚಲಿಸುವ ರೈಲಿನೊಳಗೆ ಒಬ್ಬ ಪಾದ್ರಿ ಮತ್ತು ಭಕ್ತರ ಗುಂಪು ಪೂಜೆ ಮಾಡುತ್ತಿದ್ದರು. ಅವರು ಬಿಳಿ ಬಟ್ಟೆ ಧರಿಸಿ ಕೋಚ್ ಒಳಗೆ ಪೂಜೆಯನ್ನು ನಡೆಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಜನರು, ರೈಲಿನಲ್ಲಿ ಈ ಕಾರ್ಯಕ್ರಮ ಮಾಡಲು ಪರವಾನಿಗೆ ಕೊಟ್ಟಿದ್ದು ಯಾರು? ಈ ರೀತಿ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶವಿದ್ಯಾ ಎಂದು ಪ್ರಶ್ನಿಸಿದ್ದರು.