ಜಮ್ಮು-ಕಾಶ್ಮೀರ, ಜು. 13 (DaijiworldNews/AA): ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಆರೋಪಗಳು ಸುಳ್ಳು, ಆಧಾರರಹಿತ ಮತ್ತು ಮಾನನಷ್ಟಕರ ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕ ತಿಳಿಸಿದ್ದು, ಕಾನೂನು ನೋಟಿಸ್ ಜಾರಿ ಮಾಡಿದೆ.

ತಮ್ಮ ಸರ್ಕಾರವನ್ನು ಉರುಳಿಸಲು, ನ್ಯಾಷನಲ್ ಕಾನ್ಫರೆನ್ಸ್ ಶಾಸಕರಿಗೆ ಬಿಜೆಪಿ ಸಚಿವ ಸ್ಥಾನ ಮತ್ತು ಹಣದ ಆಮಿಷವೊಡ್ಡುತ್ತಿದೆ ಎಂದು ಒಮರ್ ಅಬ್ದುಲ್ಲಾ ಅವರು ಆರೋಪಿಸಿದ್ದರು. ಅವರ ಆರೋಪಗಳು ಸುಳ್ಳು, ಆಧಾರರಹಿತ ಮತ್ತು ಮಾನನಷ್ಟಕರ. ಅವರು ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು, 7 ದಿನಗಳಲ್ಲಿ ಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಸೇರಿದಂತೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬಿಜೆಪಿ ಎಚ್ಚರಿಸಿದೆ.
ಕಳೆದ ವಾರ ಹಜರತ್ಬಾಲ್ನಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಸಿಎಂ, "ಬಿಜೆಪಿ ನ್ಯಾಷನಲ್ ಕಾನ್ಫರೆನ್ಸ್ ಒಡಕು ಸೃಷ್ಟಿಸುವ ಮೂಲಕ ತನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಕೇಸರಿ ಪಾಳಯಕ್ಕೆ ಸೇರಲು ತನಗೆ 20-30 ಕೋಟಿ ರೂ. ಮತ್ತು ಸಚಿವ ಸ್ಥಾನ ನೀಡಲಾಗಿತ್ತು ಎಂದು ಜಮ್ಮುವಿನ ಎನ್ಸಿ ಶಾಸಕರೊಬ್ಬರು ಹೇಳಿದ್ದಾರೆ" ಎಂದು ತಿಳಿಸಿದ್ದರು.
"ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು, ದುರುದ್ದೇಶಪೂರಿತ ಮತ್ತು ಯಾವುದೇ ವಾಸ್ತವಿಕ ಆಧಾರವಿಲ್ಲದೆ ಹೇಳಿಕೆ. ಪಕ್ಷದ ವರ್ಚಸ್ಸನ್ನು ಹಾಳುಮಾಡಲು ಉದ್ದೇಶಪೂರ್ವಕವಾಗಿ ಆರೋಪಗಳನ್ನು ಮಾಡಲಾಗಿದೆ. ಇದರಿಂದಾಗಿ ಪಕ್ಷದ ಪ್ರತಿಷ್ಠೆಗೆ ಹಾನಿಯಾಗಿದೆ" ಎಂದು ಬಿಜೆಪಿ ಮುಖ್ಯಮಂತ್ರಿಗೆ ನೋಟಿಸ್ ಕಳುಹಿಸಿದೆ.