ಬಿಹಾರ, ಜು. 13 (DaijiworldNews/AA): ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಾಬೇಕೆಂಬುದು ಅಭ್ಯರ್ಥಿಗಳ ಕನಸಾಗಿರುತ್ತದೆ. ತಮ್ಮ ಕನಸಿಗಾಗಿ ಹಲವಾರು ತ್ಯಾಗ ಮಾಡಿರುತ್ತಾರೆ. ಹೀಗೆ ತಮ್ಮ ದಂತವೈದ್ಯಕೀಯ ಕ್ಷೇತ್ರವನ್ನು ತೊತೆದು ಯುಪಿಎಸ್ಸಿ ಪರೀಕ್ಷೆ ಬರೆದು 36ನೇ ರ್ಯಾಂಕ್ ಪಡೆದ ಡಾ. ದೀಪಾಲಿ ಮಾಹ್ತೋ ಅವರ ಯಶೋಗಾಥೆ ಇದು.

ಡಾ. ದೀಪಾಲಿ ಅವರು ಬಿಹಾರದ ಸಮಸ್ತಿಪುರ ಜಿಲ್ಲೆಯವರು. ಅವರು ಸಂಜಯ್ ಮಾಹ್ತೋ ಮತ್ತು ಸುಲೇಖಾ ಮಾಹ್ತೋ ದಂಪತಿಯ ಪುತ್ರಿ. ಡಾ. ದೀಪಾಲಿಯ ತಂದೆ ಸಂಜಯ್ ಮಾಹ್ತೋ ಅವರು ಆಡಳಿತ ಮತ್ತು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಕಂದಾಯ ಇಲಾಖೆಯಿಂದ ನಿವೃತ್ತರಾಗಿದ್ದಾರೆ.
ಪ್ರಾಥಮಿಕ ಶಿಕ್ಷಣದ ಬಳಿಕ ಡಾ. ದೀಪಾಲಿ ಅವರು ಮುಂಬೈನಲ್ಲಿ ಉನ್ನತ ಶಿಕ್ಷಣ ಪಡೆದರು. ದಂತ ವೈದ್ಯಕೀಯ (ಡೆಂಟಿಸ್ಟ್ರಿ) ಪದವಿ ಪೂರ್ಣಗೊಳಿಸಿ ಕೆಲಕಾಲ ದಂತ ವೈದ್ಯೆಯಾಗಿ ಸೇವೆ ಸಲ್ಲಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನ ಹೊಂದಿದ್ದರೂ, ಯುಪಿಎಸ್ಸಿ ಬರೆಯಬೇಕೆಂಬ ತಮ್ಮ ಕನಸನ್ನು ಅವರು ಎಂದಿಗೂ ಕೈಬಿಡಲಿಲ್ಲ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಡಾ. ದೀಪಾಲಿ ಅವರು ಸತತ ಎರಡನೇ ಬಾರಿಯೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 2024ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 105ನೇ ರ್ಯಾಂಕ್ ಪಡೆದು ತರಬೇತಿ ಪಡೆಯುತ್ತಿದ್ದರು.
ಆದರೆ ತಾವು ಪಡೆದ 105 ರ್ಯಾಂಕ್ ದೀಪಾಲಿಯವರಿಗೆ ತೃಪ್ತಿ ನೀಡಿರಲಿಲ್ಲ. ಹೀಗಾಗಿ ಅವರು 2025ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 36ನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ