ನವದೆಹಲಿ, ಜು. 12 (DaijiworldNews/AA): ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ(74) ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಭಾರತ ಸರ್ಕಾರ, ಜುಲೈ 13ರಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಆಚರಿಸಲಿದೆ.

ಜುಲೈ 13ರಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಆಚರಿಸಲಿರುವ ಹಿನ್ನೆಲೆ, ದೇಶಾದ್ಯಂತ ರಾಷ್ಟ್ರಧ್ವಜ ಅರ್ಧಕ್ಕೆ ಹಾರಲಿದೆ. ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕತಾರ್ನ ಮಾಜಿ ಅಮೀರ್ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ಕತಾರ್ನ ಪಿತಾಮಹ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ನಿಧನದಿಂದ ನಮಗೆ ತೀವ್ರ ದುಃಖವಾಗಿದೆ. ಅವರು ಕತಾರ್ ಅನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ದ ದಾರ್ಶನಿಕ ನಾಯಕರಾಗಿದ್ದರು. ನಾವು ಅವರನ್ನು ನಿಜವಾದ ಸ್ನೇಹಿತ ಎಂದು ನೆನಪಿಸಿಕೊಳ್ಳುತ್ತೇವೆ" ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
"ಫೆಬ್ರವರಿ 2024 ರಲ್ಲಿ ಕತಾರ್ಗೆ ನನ್ನ ಕೊನೆಯ ಭೇಟಿಯ ಸಮಯದಲ್ಲಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿತು. ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ" ಎಂದು ಸಂತಾಪ ಸೂಚಿಸಿದ್ದಾರೆ.