ಬಾಲಸೋರ್, ಜು. 12 (DaijiworldNews/TA): ಎಟಿಎಂ ಯಂತ್ರ ಒಡೆದು ಹಣ ಕಳವು ಮಾಡುವ ಪ್ರಕರಣಗಳು ಸಾಮಾನ್ಯ. ಆದರೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ದುಷ್ಕರ್ಮಿಗಳ ತಂಡವೊಂದು ಎಟಿಎಂ ಯಂತ್ರವನ್ನೇ ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಿ ಹಣ ದೋಚಿರುವ ಸಿನಿಮೀಯ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗಿನ ಜಾವ ಸುಮಾರು 2 ಗಂಟೆ ವೇಳೆಗೆ ಐದಕ್ಕೂ ಹೆಚ್ಚು ಮಂದಿ ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಎಟಿಎಂ ಕೇಂದ್ರದ ಬಳಿ ಬಂದಿದ್ದಾರೆ. ಬಳಿಕ 2.14ರ ಸುಮಾರಿಗೆ ವಾಹನದಿಂದ ಇಳಿದ ದುಷ್ಕರ್ಮಿಗಳು ಎಟಿಎಂ ಕಿಯೋಸ್ಕ್ ಒಳನುಗ್ಗಿ, ಭಾರವಾದ ಹಗ್ಗದ ಒಂದು ತುದಿಯನ್ನು ಎಟಿಎಂ ಯಂತ್ರಕ್ಕೆ ಹಾಗೂ ಇನ್ನೊಂದು ತುದಿಯನ್ನು ತಮ್ಮ ಕಾರಿಗೆ ಕಟ್ಟಿದ್ದಾರೆ.
ಬಳಿಕ ಕಾರನ್ನು ವೇಗವಾಗಿ ಚಲಾಯಿಸಿದ ಪರಿಣಾಮ ಎಟಿಎಂ ಯಂತ್ರವೇ ಕಿಯೋಸ್ಕ್ನಿಂದ ಕಿತ್ತು ಬಂದಿದೆ. ಕೆಲವೇ ನಿಮಿಷಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸಿದ ಆರೋಪಿಗಳು ಯಂತ್ರವನ್ನು ವಾಹನಕ್ಕೆ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಎಟಿಎಂ ಯಂತ್ರವನ್ನು ಒಡೆದು ಅದರಲ್ಲಿದ್ದ ನಗದನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಸಂಪೂರ್ಣ ಘಟನೆ ಎಟಿಎಂ ಕೇಂದ್ರದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಕಾರು ಬಂದು ನಿಲ್ಲುವುದರಿಂದ ಹಿಡಿದು ಯಂತ್ರವನ್ನು ಎಳೆದುಕೊಂಡು ತೆರಳುವ ದೃಶ್ಯಗಳವರೆಗೆ ಎಲ್ಲವೂ ಸೆರೆಯಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಲಸೋರ್ ಜಿಲ್ಲೆಯ ಈ ಭಾಗದಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಹಾಗೂ ಎಟಿಎಂ ಕೇಂದ್ರಗಳ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ಥಾರ್ ವಾಹನದ ನೋಂದಣಿ ಸಂಖ್ಯೆ ಹಾಗೂ ಆರೋಪಿಗಳ ಗುರುತು ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.