ಬೆಂಗಳೂರು, ಜು. 12 (DaijiworldNews/TA): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಾಗಿ ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಇ-ಡ್ರೈವ್’ ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್ಗಳು ಹಾಗೂ ರೂ.1,505 ಕೋಟಿ ಸಹಾಯಧನ ಮಂಜೂರಾಗಿದ್ದರೂ, ರಾಜ್ಯ ಸಚಿವ ಸಂಪುಟದಿಂದ ಇನ್ನೂ ಅನುಮೋದನೆ ಸಿಗದಿರುವ ವಿಚಾರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

ಈ ಕುರಿತು ಜೆಡಿಎಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಸಾರ್ವಜನಿಕ ಹಿತಕ್ಕಿಂತ ಸ್ವಹಿತಾಸಕ್ತಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್, ಯೋಜನೆ ಅನುಷ್ಠಾನದಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಲಾಗುತ್ತಿದೆ ಎಂದು ಟೀಕಿಸಿದೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಯತ್ನದಿಂದ ಬೆಂಗಳೂರಿಗೆ ಈ ಯೋಜನೆ ಮಂಜೂರಾಗಿದ್ದು, 2025ರಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ರಾಜ್ಯ ಸರ್ಕಾರದಿಂದ ಅಗತ್ಯ ಅನುಮೋದನೆ ದೊರೆಯದೇ ಯೋಜನೆ ಸ್ಥಗಿತಗೊಂಡಿದೆ ಎಂದು ಜೆಡಿಎಸ್ ಆರೋಪಿಸಿದೆ.
ಹೈದರಾಬಾದ್, ಸೂರತ್ ಹಾಗೂ ಅಹಮದಾಬಾದ್ ನಗರಗಳು ಈಗಾಗಲೇ ಯೋಜನೆ ಜಾರಿಯಲ್ಲಿ ಮುನ್ನಡೆ ಸಾಧಿಸಿದ್ದರೆ, ಕರ್ನಾಟಕ ಸರ್ಕಾರ ಮಾತ್ರ ರಾಜಕೀಯ ಕಾರಣಗಳಿಂದ ಯೋಜನೆಯನ್ನು ವಿಳಂಬಗೊಳಿಸುತ್ತಿದೆ ಎಂದು ಜೆಡಿಎಸ್ ದೂರಿದೆ. ಇದೇ ವೇಳೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ, “ಬೆಂಗಳೂರು ಜನರಿಗೆ ಹೊಸ ಬಸ್ಗಳು ಬೇಡವೇ? ಕೇಂದ್ರ ನೀಡಿರುವ ಸಹಾಯಧನವನ್ನೂ ಬಳಸಿಕೊಳ್ಳದಿರುವುದು ಆಡಳಿತ ವೈಫಲ್ಯವಲ್ಲವೇ?” ಎಂದು ಜೆಡಿಎಸ್ ಪ್ರಶ್ನಿಸಿದೆ. ಯೋಜನೆ ಕೈತಪ್ಪಿದರೆ ಅದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದಕ್ಕೆ ಮುನ್ನ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸಚಿವ ಭೈರತಿ ಸುರೇಶ್ ಅವರು, ಕೇಂದ್ರ ಸರ್ಕಾರದ ಯೋಜನೆಯ ಷರತ್ತುಗಳಿಂದ ರಾಜ್ಯ ಸಾರಿಗೆ ಸಂಸ್ಥೆಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೇಂದ್ರ ನೀಡುವ ಸಬ್ಸಿಡಿ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಿಲ್ಲ ಎಂಬ ಕಾರಣದಿಂದ ರಾಜ್ಯ ಸರ್ಕಾರ ಯೋಜನೆಯನ್ನು ಮರುಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ, ಯೋಜನೆ ಅನುಷ್ಠಾನದಲ್ಲಿ ಉಂಟಾಗಿರುವ ವಿಳಂಬದ ಕುರಿತು ಜೆಡಿಎಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಈ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.