ಬೆಂಗಳೂರು, ಜು. 11 (DaijiworldNews/TA): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳವನ್ನು ಆಯೋಜಿಸುವ ಪ್ರಸ್ತಾವನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಕಂಬಳವನ್ನು ದಸರಾ ಉತ್ಸವದ ಅಂಗವಾಗಿ ನಡೆಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ.

ಈಗಾಗಲೇ ಮೈಸೂರು ಸಂಸದ ಯದುವೀರ್ ಒಡೆಯರ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ವಿರೋಧದ ಧ್ವನಿಗೆ ಸೇರ್ಪಡೆಯಾಗಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, "ಶತಮಾನಗಳ ಇತಿಹಾಸ ಹೊಂದಿರುವ ಮೈಸೂರು ದಸರಾ ತನ್ನದೇ ಆದ ಪರಂಪರೆ ಮತ್ತು ವೈಶಿಷ್ಟ್ಯವನ್ನು ಹೊಂದಿದೆ. ಅದಕ್ಕೆ ಧಕ್ಕೆ ತರುವಂತಹ ಪ್ರಯತ್ನಗಳು ಅಗತ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಂಬಳವು ಕರಾವಳಿ ಭಾಗದ ಸಂಸ್ಕೃತಿ, ನಂಬಿಕೆ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಅಲ್ಲಿನ ಭೌಗೋಳಿಕ ಹಾಗೂ ನೈಸರ್ಗಿಕ ಪರಿಸರಕ್ಕೆ ಅವಿನಾಭಾವವಾಗಿ ಬೆಸೆದುಕೊಂಡಿದೆ. ಹೀಗಾಗಿ ಅದನ್ನು ಮೈಸೂರಿಗೆ ಸ್ಥಳಾಂತರಿಸುವ ಮೂಲಕ ಅದರ ಪಾವಿತ್ರ್ಯ ಮತ್ತು ಸಾಂಸ್ಕೃತಿಕ ಹಿನ್ನೆಲೆಗೆ ಧಕ್ಕೆ ಉಂಟಾಗಬಹುದು ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಕರಾವಳಿಯ ಹಸಿರು-ನೀರಿನ ವಾತಾವರಣದಲ್ಲೇ ಕಂಬಳದ ಸೊಬಗು ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ ಮೈಸೂರು ಹಾಗೂ ಕರಾವಳಿ ಭಾಗದ ಜನರ ಭಾವನೆಗಳಿಗೆ ನೋವುಂಟು ಮಾಡುವ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬಾರದು ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಇನ್ನು, ರಾಜ್ಯ ಸರ್ಕಾರವು ಅಕ್ಟೋಬರ್ 11ರಿಂದ 21ರವರೆಗೆ ಮೈಸೂರು ದಸರಾ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದ್ದು, ಈ ವರ್ಷದ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ವಿಚಾರ ಇದೀಗ ರಾಜಕೀಯ ಮತ್ತು ಸಾಂಸ್ಕೃತಿಕ ಚರ್ಚೆಯ ಕೇಂದ್ರಬಿಂದುವಾಗಿದೆ. ಒಂದು ಕಡೆ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಕಂಬಳ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ರಾಜಮನೆತನ, ರಾಜಕೀಯ ನಾಯಕರು ಹಾಗೂ ಕರಾವಳಿ ಭಾಗದ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರಿಣಾಮವಾಗಿ, ಈ ವಿಚಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.